ಬೆಂಗಳೂರು; ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂದು ಕಾಂಗ್ರೆಸ್ ನಲ್ಲಿ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ರಾಜಣ್ಣ ಅವರಿಗೂ ತೇಜೋವಧೆ ಮಾಡಬಾರದು. ರಾಜಣ್ಣ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವವರು. ಕಾಂಗ್ರೆಸ್ ಈಗ ಉರಿಯುವ ಮನೆಯಾಗಿದೆ. ಅತೃಪ್ತಿ ಅಲ್ಲಿ ಎದ್ದು ಕಾಣುತ್ತಿದೆ. ಎಐಸಿಸಿ ಅಧ್ಯಕ್ಷರೇ ಅವರ ನೋವನ್ನು ಹೇಳಿಕೊಂಡಿದ್ದಾರೆ. ರಾಜಣ್ಣ ಹೇಳಿದಂತೆ ಸೆಪ್ಟೆಂಬರ್ ಕ್ರಾಂತಿಯನ್ನು ಹೆಚ್.ಸಿ. ಬಾಲಕೃಷ್ಣ ಶುರು ಮಾಡಿದ್ದಾರೆ. ರಾಜಣ್ಣ ಬಿಜೆಪಿಗೆ ಬರುವ ಬಗ್ಗೆ ನಾನು ಮಾತಾಡಲು ಆಗಲ್ಲ. ವರಿಷ್ಠರು ಇದ್ದಾರೆ, ಈಗ ಮಾತಾಡಲು ಸೂಕ್ತ ಅಲ್ಲ. ನಾನು ಮಾತಾಡಿದರೆ ಅದು ಬಾಲಕೃಷ್ಣ ಮಾತಾಡಿದಂತೆ ಆಗುತ್ತದೆ. ರಾಜಣ್ಣ ಒಬ್ಬ ಶಾಸಕ, ಬಾಲಕೃಷ್ಣ ಅವರ ಬಗ್ಗೆ ಈ ರೀತಿಯ ಹೇಳಿಕೆ ಕೊಡುವುದು ಎಷ್ಟು ಸರಿ. ಇದನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ಸಮರ್ಥಿಸಿಕೊಳ್ಳುತ್ತದೋ ಗೊತ್ತಿಲ್ಲ. ಅವರು ಯಾರೂ ನಮ್ಮ ಸಂಪರ್ಕಕ್ಕೆ ಬಂದಿಲ್ಲ. ನಾವು ಅವರ ರೀತಿ ಲೂಸ್ ಟಾಕ್ ಮಾತಾಡಲು ಆಗಲ್ಲ ಎಂದಿದ್ದಾರೆ.
ಭಾನು ಮುಷ್ತಾಕ್ ಗೆ ಇಂದು ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ ವಿಚಾರದ ಬಗ್ಗೆ ಮಾತನಾಡಿ ಅವರನ್ನು ಕರೆದಿರುವುದು ವಿವಾದ ಸೃಷ್ಟಿ ಮಾಡಲು. ನವರಾತ್ರಿ ಹಿಂದೂಗಳ ಪವಿತ್ರ ನಂಬಿಕೆಯ ಹಬ್ಬ. ನಂಬಿಕೆ ಇಲ್ಲದವರನ್ನು ಕರೆದು ಯಾಕೆ ಚೆಲ್ಲಾಟ ಆಡುತ್ತೀರಾ?. ಅವರು ಪೂಜಿಸುತ್ತಾರೋ ಅಥವಾ ಸುಮ್ಮನೆ ಉದ್ಘಾಟನೆ ಮಾಡುತ್ತಾರೋ. ದಸರಾ ಹಬ್ಬಕ್ಕೆ ಕಾಂಗ್ರೆಸ್ ಸರ್ಕಾರ ಮಸಿ ಬಳಿಯುವ ಕೆಲಸ ಆಗುವುದು ಬೇಡ. ಇದನ್ನು ತಡೆಯುವ ಕೆಲಸ ಜನರು ಮಾಡುತ್ತಾರೆ ಎಂದರು. ಇವರ ಎಲ್ಲಾ ಲೋಪ ಮುಚ್ಚಿಕೊಳ್ಳಲು ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಹಮ್ಮದ್ ಪೈಗಂಬರ್ ಕುರಿತ ಕಾರ್ಯಕ್ರಮದಲ್ಲಿ ವಿದೇಶಿ ವ್ಯಕ್ತಿಗಳು ಬಂದು ಭಾಷಣ ಮಾಡಲು ಅವಕಾಶ ಇಲ್ಲ . ಆ ರೀತಿ ಮಾಡಿದರೆ ಅದಕ್ಕೆ ಅವಕಾಶ ನಾವು ಕೊಡಲ್ಲ. ಸಂವಿಧಾನ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಕಾಂಗ್ರೆಸ್ ನಾಯಕರು ಕಾನೂನು ಅರ್ಥ ಮಾಡಿಕೊಳ್ಳಬೇಕು, ನಾಟಕ ಮಾಡುವುದಲ್ಲ. ಏನು ಘನ ಸಾಧನೆಗೆ ಇದನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪ್ರವಾಸಿ ವೀಸಾದಲ್ಲಿ ಬಂದಿರುವ ವ್ಯಕ್ತಿಗಳಿಗೆ ಏನು ನಿರ್ಬಂಧ ಇದೆಯೋ ಅದು ಪಾಲನೆಯಾಗಬೇಕು. ಸಿಎಂ ಉಪಸ್ಥಿತಿಯಲ್ಲೇ ಇಂತಹ ಕಾನೂನು ಉಲ್ಲಂಘನೆಯಾದರೆ?. ಇದರಿಂದ ಏನು ಮಾಡಲು ಹೊರಟಿದ್ದಾರೆ ಅಂತಾ ಅರ್ಥ ಆಗುತ್ತಿಲ್ಲ. ಇವರು ತುಷ್ಟೀಕರಣ ಅತಿರೇಖಕ್ಕೆ ಹೋಗುವುದು. ಕಾಂಗ್ರೆಸ್ ಗೆ ಕಾನೂನು ಅಂದರೆ ಗೌರವ ಇಲ್ಲ ಎಂದಿದ್ದಾರೆ.











