ಮನೆ Latest News ಅಪರ್ಣಾ ಅಂತ್ಯಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಪತಿ ನಾಗರಾಜ್ ವಸ್ತಾರೆ

ಅಪರ್ಣಾ ಅಂತ್ಯಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಪತಿ ನಾಗರಾಜ್ ವಸ್ತಾರೆ

0

ಬೆಂಗಳೂರು; ನಿನ್ನೆ ನಿಧನರಾದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬೆಂಗಳೂರಿನ ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಬನಶಂಕರಿಯ ಅವರ ನಿವಾಸದಲ್ಲಿ 11-30 ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರ ಪತಿ ನಾಗರಾಜ್ ವಸ್ತಾರೆ ಹೇಳಿದ್ದಾರೆ.

ಇದರ ಮಧ್ಯೆ ಬಾವನಾತ್ಮಕ ಫೇಸ್ ಬುಕ್ ಪೋಸ್ಟ್ ಒಂದನ್ನು ಅಪರ್ಣಾ ಪತಿ ನಾಗರಾಜ್ ವಸ್ತಾರೆ ಹಾಕಿದ್ದಾರೆ.ಅದರಲ್ಲಿ ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಡ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು.

ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚಿತು. ಊರಿನ ಅಂದಗೆಟ್ಟಿತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ.ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ ಎಂದು ಬರೆದುಕೊಂಡಿದ್ದಾರೆ.

ಸ್ಪಷ್ಟ ಉಚ್ಛಾರಣೆ, ಹಾವ ಭಾವ ತುಂಬಿದ ನಿರೂಪಣೆಯ ಮೂಲಕ ಗಮನ ಸೆಳೆದಿದ್ದ ಅಪರ್ಣಾ ವಸ್ತಾರೆ ಇನ್ನಿಲ್ಲ

ಬೆಂಗಳೂರು; ಸ್ಪಷ್ಟ ಉಚ್ಛಾರಣೆ, ಹಾವ ಭಾವ ತುಂಬಿದ ನಿರೂಪಣೆಯ ಮೂಲಕ ಕನ್ನಡಿಗರ ಹೃದಯ ಕದ್ದಿದ್ದ ಅಪರ್ಣಾ ವಸ್ತಾರೆ ವಿಧಿವಶರಾಗಿದ್ದಾರೆ.

 

ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ (57) ನಿಧನರಾಗಿದ್ದಾರೆ. ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಶ್ವಾಸಕೋಶದ ಕ್ಯಾನ್ಸರ್ ನಿಂದ ಅಪರ್ಣಾ ಬಳಲುತ್ತಿದ್ದರು.

ನಟಿಯಾಗಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ ಅವರು 1984 ರಲ್ಲಿ ಮಸಣದ ಹೂವು ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಸಾಲು ಸಾಲು ಸಿನಿಮಾಗಳು ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಸಾವಿರಾರು ಅತ್ಯದ್ಭುತ  ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ ಹೆಗ್ಗಳಿಕೆ ಅವರದ್ದು.

ಅಪರ್ಣಾ ಅವರು ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ, ವಿವಿಧ ಭಾರತಿ ರೇಡಿಯೋ ಜಾಕಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಕಿರುತೆರೆ ಶೋ ಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದರು.ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕಾರ್ಯಕ್ರಮದ ವರಲಕ್ಷ್ಮೀ ಅನ್ನೋ ಹಾಸ್ಯ ಪಾತ್ರ ಅವರಿಗೆ ಭಾರೀ ಹೆಸರು ತಂದುಕೊಟ್ಟಿತ್ತು.

1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರಮವೊಂದನ್ನು ಸತತವಾಗಿ 8 ಗಂಟೆಗಳ ನಿರೂಪಣೆ ಮಾಡಿ ಅಪರ್ಣಾ ದಾಖಲೆ ಬರೆದಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಅಪರ್ಣಾ ಭಾಗಿಯಾಗಿದ್ದರು. ಬೆಂಗಳೂರಿಗರಂತೂ ಗಲೂ ಮೆಟ್ರೋದಲ್ಲಿ ಅವರ ಧ್ವನಿಯನ್ನು ಕೇಳುತ್ತಲೇ ಇರುತ್ತಾರೆ. ಅಪರ್ಣಾ ಪತಿ ಲೇಖಕ, ವಾಸ್ತುಶಿಲ್ಪಿ ನಾಗರಾಜ್ ವಸ್ತಾರೆ ಅವರನ್ನು ಅಗಲಿದ್ದಾರೆ.ಇನ್ನು ಅಪರ್ಣಾ ನಿಧನದ ಬಗ್ಗೆ ಅವರ ಪತಿ ನಾಗರಾಜ್ ವಸ್ತಾರೆ ವೀಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.ಅಪರ್ಣಾ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದರು.ಕ್ಯಾನ್ಸರ್ ನಾಲ್ಕನೇ ಸ್ಟೇಜ್ ನಲ್ಲಿತ್ತು ಅವರು ಚಿಕಿತ್ಸೆ ಪಡೆಯುತ್ತಿದ್ದರು.ಅಲ್ಲದೇ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಾವು ಸೋತಿದ್ದೇವೆ ಎಂದು ಅವರು ಹೇಳಿದ್ದಾರೆ.ಅಲ್ಲದೇ ಅಂತಿಮ ದರ್ಶನದ ವ್ಯವಸ್ಥೆ, ಮುಂದಿನ ಕಾರ್ಯಕ್ರಮದ ಬಗ್ಗೆಯೂ ಅವರು ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.ರಡು ವರುಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಚಿಕಿತ್ದೆ ಪಡೆಯುತ್ತಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ನಾವು ಸೋತಿದ್ದೇವೆ ಎಂದು ಅಪರ್ಣಾ ಅವರ ಪತಿ ಕಣ್ಣೀರಿಟ್ಟಿದ್ದಾರೆ.

ಇನ್ನು ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.