ಬೆಂಗಳೂರು; ತಮ್ಮ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿರುವ ನಟ ದರ್ಶನ್, ನಟಿ ಪವಿತ್ರ ಗೌಡ ಹಾಗೂ ಇತರೆ 11 ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆ ಅವರನ್ನು ಇಂದು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮುಂದೆ ಪೊಲೀಸರು ಹಾಜರು ಪಡಿಸಿದ್ರು.
ಈ ವೇಳೆ ಪ್ರಕರಣದ ಕುರಿತಾದ ಸರ್ಕಾರದ ಪರವಾದ ವಕೀಲರಾದ ಪ್ರಸನ್ನಕುಮಾರ್ ಅವರು ಆರೋಪಿಗಳನ್ನು ಇನ್ನೂ ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಲು ಬಾಕಿ ಇರೋದರಿಂದ ಅವರನ್ನು ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದ್ರು. ಇನ್ನೂ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು. ಆದರೆ ಡಿ ಗ್ಯಾಂಗ್ ಪರವಾದ ವಕೀಲರಾದ ಅನಿಲ್ ಬಾಬು ಈಗಾಗಲೇ 6 ದಿನಗಳ ಕಾಲ ದರ್ಶನ್ ಹಾಗೂ ಪವಿತ್ರ ಗೌಡ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಾಗಾಗಿ ಪೊಲೀಸ್ ಕಸ್ಟಡಿಯ ಅವಶ್ಯಕತೆ ಇಲ್ಲ ಎಂದರು. ವಿಚಾರಣೆ ವೇಳೆ ಜಡ್ಜ್ ಮುಂದೆ ಪವಿತ್ರ ಗೌಡ ಕಣ್ಣೀರು ಸುರಿಸಿದ್ರು. ಇನ್ನು ಎರಡೂ ಕಡೆ ವಾದ ಪ್ರತಿವಾದ ಆಲಿಸಿದ ಜಡ್ಜ್ ವಿಶ್ವನಾಥ್ ಸಿ ಗೌಡರ್ 13 ಆರೋಪಿಗಳನ್ನು ಇನ್ನೂ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
ಯಾರಿಗೆಲ್ಲಾ ಪೊಲೀಸ್ ಕಸ್ಟಡಿ?
ಎ1 ಪವಿತ್ರಗೌಡ, ಎ2 ದರ್ಶನ್, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6ಜಗದೀಶ್, ಎ7 ಅನುಕುಮಾರ್, ಎ10ವಿನಯ್ ,ಎ12 ಲಕ್ಷ್ಮಣ್,ಎ13 ದೀಪಕ್, ಎ14 ಪ್ರದೋಶ್, ಎ16 ನಿಖಿಲ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಆದೇಶ ನೀಡಿದ್ದಾರೆ. ಅದರಂತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೆ ಆರೋಪಿಗಳ ವಿಚಾರಣೆ ಮುಂದುವರೆಯಲಿದೆ. ಜೂನ್ 20 ರಂದು ಆರೋಪಿಗಳನ್ನು ಮತ್ತೆ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.
ಏನೆಲ್ಲಾ ವಾದ ವಿವಾದಗಳು ನಡೆಯಿತು?
ಸರ್ಕಾರದ ಪರವಾದ ವಕೀಲರು ಹೇಳಿದ್ದೇನು?
ಸರ್ಕಾರ ಪರವಾಗಿ ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್ ಸುಳ್ಳು ಕಥೆ ಹೇಳಿಕೊಂಡು ಆರೋಪಿಗಳು ಹಾಜಾರಾಗಲು ಹೋಗಿದ್ದಾರೆ..ಅದಕ್ಕೂ ಮೊದ್ಲು ಅವರು ಮೈಸೂರಿನಲ್ಲಿದ್ದ ದರ್ಶನ್ ಗೆ ಮಾಹಿತಿ ನೀಡಿದ್ದಾರೆ.ಹಾಗಾಗಿ ಅದರ ಬಗ್ಗೆ ಮೈಸೂರಿನಲ್ಲಿ ಸ್ಥಳ ಮಹಜರು ಮಾಡ್ಬೇಕಿದೆ..ಆರೋಪಿ ದರ್ಶನ ಕೊಲೆ ಬಳಿಕ ಮೈಸೂರಿಗೆ ಹೋಗಿದ್ದಾರೆ.ಅಲ್ಲಿ ಘಟನೆ ಬಗ್ಗೆ ಇತರೆ ಆರೋಪಿಗಳ ಜೊತೆ ಮಾತನಾಡಿದ್ದಾರೆ. ಹೀಗಾಗಿ ಆರೋಪಿ ದರ್ಶನ್ರನ್ನು ಕಸ್ಟಡಿಗೆ ನೀಡಲು ಮನವಿ ಮಾಡಿದ್ರು.ಅಲ್ಲದೇ ಕೊಲೆಯಾದ ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ. ಆರೋಪಿ 5, ಆರೋಪಿ 6 ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ ಎಸ್ಪಿಪಿ ಪ್ರಸನ್ನ ಕುಮಾರ್.ಚಿತ್ರ ಹಿಂಸೆ ನೀಡಿ ರೇಣುಕಾಸ್ವಾಮಿಯನ್ನ ಸಾಯಿಸಲಾಗಿದೆ ಎಂದಿದ್ದಾರೆ.
ದರ್ಶನ್ ಪರವಾದ ವಕೀಲರ ವಾದ
ಎಲ್ಲದಕ್ಕೂ ಎ2ಆರೋಪಿ ದರ್ಶನ್ ಕಾರಣ ಅಂತ ಹೇಳುವುದು ಸರಿಯಲ್ಲ .ದರ್ಶನ್ ಪರ ವಕೀಲ ಅನಿಲ್ ಬಾಬು ವಾದ ಮಂಡನೆ ಮಾಡಿದ್ದಾರೆ. ಅಲ್ಲದೇ ಅನುಮತಿ ಪಡೆಯದೆ ಆರೋಪಿಗಳ ಮೊಬೈಲ್ ವಶಕ್ಕೆ ಪಡೆಯಲಾಗಿದೆ.ಆರೋಪಿಗಳ ಹೇಳಿಕೆ ಹೊರಗೆ ಸೋರಿಕೆ ಮಾಡಲಾಗಿದೆ ಎಂದಿದ್ದಾರೆ.
ಪವಿತ್ರ ಪರವಾದ ವಕೀಲ ವಾದ
ಆರೋಪಿಗಳ ಪೈಕಿ ಮಹಿಳೆ ನೋವು ಅನುಭವಿಸ್ತಾ ಇದ್ದಾರೆ.ರಿಮ್ಯಾಂಡ್ ಅರ್ಜಿ ನೀಡ್ತಿಲ್ಲ. ಇದುವರೆಗೂ ನಮಗೆ ರಿಮ್ಯಾಂಡ್ ಅರ್ಜಿ ಬಂದಿಲ್ಲ .ನಮ್ಮ ಭೇಟಿಗೆ ಬಿಡ್ತಿಲ್ಲ ಎಂದು ಪವಿತ್ರ ಪರ ವಕೀಲರು ವಾದ ಮಂಡಿಸಿದ್ದಾರೆ.ಐದು ದಿನ ವಿಚಾರಣೆ ಮಾಡಿದ್ರು ರಿಮ್ಯಾಂಡ್ ಅಪ್ಲಿಕೇಷನ್ ನೀಡಿಲ್ಲ ಎಂದಿದ್ದಾರೆ.
ಕೊನೆಗೂ ಎರಡು ಕಡೆ ವಾದ ವಿವಾದ ಆಲಿಸಿದ ಜಡ್ಜ್ ವಿಶ್ವನಾಥ್ ಸಿ ಗೌಡರ್ 13 ಆರೋಪಿಗಳನ್ನು ಇನ್ನೂ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.