ಬೆಂಗಳೂರು: ಐಷಾರಾಮಿ ಜೀವನ ಮಾಡುತ್ತಿದ್ದ ನಟ ದರ್ಶನ್ ಇದೀಗ ದಿನಗಳನ್ನು ಕಳೆಯೋದಕ್ಕೆ ಪೇಚಾಡುತ್ತಿದ್ದಾರೆ. ಜೈಲಿನ ಉಪ್ಪು, ಹುಳಿ, ಖಾರವಿಲ್ಲದ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಜೈಲೂಟ ಸೇವಿಸಿ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸರಿಯಾಗಿ ಊಟ, ನಿದ್ದೆ ಏನೂ ಮಾಡೋದಕ್ಕೂ ಆಗುತ್ತಿಲ್ಲ. ಹಾಗಾಗಿ ಅವರಿಗೆ ಮನೆ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ನೀಡುವಂತೆ ದರ್ಶನ್ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.ಇನ್ನು ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್ ಅವರಿಗೆ ಸರಿಯಾಗಿ ಜೀರ್ಣವಾಗುತ್ತಿಲ್ಲ. ಇದರಿಂದ ಭೇದಿ ಉಂಟಾಗುತ್ತಿದೆ. ಅಲ್ಲದೇ ಫುಡ್ ಪಾಯ್ಸನ್ ಕೂಡ ಆಗುತ್ತಿದೆ ಎಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆಂದು, ಹೈಕೋರ್ಟ್ ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಜುಲೈ 25 ರಂದು ವಜಾಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲ ಅರುಣ್ ಅವರು ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ್ದರು.ಇಂದು ಆ ಅರ್ಜಿಯ ವಿಚಾರಣೆ ನಡೆಯೋದಿತ್ತು. ಅಷ್ಟರಲ್ಲಿ ದರ್ಶನ್ ಪರ ಆ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ. ತಾಂತ್ರಿಕ ಕಾರಣದಿಂದ ಅರ್ಜಿ ವಾಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.