ಮನೆ Blog ನಟ ಶಿವರಾಜ್ ಕುಮಾರ್ ಗೆ ಶಸ್ತ್ರಚಿಕಿತ್ಸೆ ಯಶಸ್ವಿ: ತಂದೆಯ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ...

ನಟ ಶಿವರಾಜ್ ಕುಮಾರ್ ಗೆ ಶಸ್ತ್ರಚಿಕಿತ್ಸೆ ಯಶಸ್ವಿ: ತಂದೆಯ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ನಿವೇದಿತಾ ಶಿವರಾಜಕುಮಾರ್

0

 

ಬೆಂಗಳೂರು; ಅನಾರೋಗ್ಯದ ಹಿನ್ನೆಲೆ ನಟ ಶಿವರಾಜ್ ಕುಮಾರ್ ಅವರು ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ದರು. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ತಂದೆಯ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ನಿವೇದಿತಾ ಶಿವರಾಜಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ದೇವರ ಕೃಪೆಯಿಂದ ನನ್ನ ತಂದೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣರಾಗಿರುವ, ಮಿಯಾಮಿ ಹೆಲ್ತ್ ಕೇರ್ ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ. ಮುರುಗೇಸನ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ತೂರ್ವಕ ಧನ್ಯಾದಗಳನ್ನು ಅರ್ಪಿಸುತ್ತೇವೆ.

ಈ ಪ್ರಯಾಣದಲ್ಲಿ ನನ್ನ ತಂದೆ ತೋರಿದ ಧೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನು ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮಗೂ ಆಶಾಭಾವ ಮೂಡಿಸಿ ನಮ್ಮೆಲ್ಲರಿಗೂ ಧೈರ್ಯ ಒದಗಿಸಿದೆ.

ಇದರ ನಡುವೆ, ಎಲ್ಲಾ ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮದ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಶಕ್ತಿಯ ಮೂಲವಾಗಿವೆ. ನೀವೆಲ್ಲರೂ ತೋರಿದ ಕಾಳಜಿ ನಮಗೆ ಮುನ್ನಡೆಯುವ ಬಲ ತುಂಬಿದ್ದು, ಅದಕ್ಕೆ ನಾವೆಂದೆಂದಿಗೂ ಆಭಾರಿಯಾಗಿರುತ್ತೇವೆ.

ತಂದೆಯ ಚೇತರಿಕೆಯ ಕುರಿತು ಬರುವ ದಿನಗಳಲ್ಲಿ ತಿಳಿಸುತ್ತೇವೆ. ಈ ಪಯಣದಲ್ಲಿ ನಾವು ಮುಂದಿನ ಹೆಜ್ಜೆ ಇಡುತ್ತಿರಲು, ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ನಟ ಶಿವರಾಜ್ ಕುಮಾರ್ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯು ಟಿ ಖಾದರ್

ಬೆಂಗಳೂರು: ಅನಾರೋಗ್ಯದ ನಿಮಿತ್ತ ಅಮೇರಿಕಾಗೆ ಚಿಕಿತ್ಸೆಗಾಗಿ ತೆರಳಲಿರುವ ನಟ ಶಿವರಾಜ್ ಕುಮಾರ್ ಶೀಘ್ರ ಚೇತರಿಕೆಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ. ನನಗೆ ತಿಳಿದಂತೆ ಶಿವರಾಜ್ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ. ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು‌ ಕಾಪಾಡಲಿದೆ ಎಂದಿದ್ದಾರೆ.

ಇನ್ನು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ನಮ್ಮೆಲ್ಲರ ನೆಚ್ಚಿನ ನಟ ಡಾ. ಶಿವರಾಜ್‌ ಕುಮಾರ್‌ ಅವರು ಇಂದು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದು, ಅತೀ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕೋಟ್ಯಂತರ ಕನ್ನಡಿಗರ ಆಶೀರ್ವಾದ ಹಾಗೂ ಹಿತೈಷಿಗಳ ಪ್ರಾರ್ಥನೆ ಅವರ ಜೊತೆಗಿದ್ದು ಆರೋಗ್ಯವಂತರಾಗಿ ಮರಳಲಿದ್ದಾರೆ ಎನ್ನುವ ವಿಶ್ವಾಸ ನಮ್ಮೆಲ್ಲರದ್ದಾಗಿದೆ ಎಂದಿದ್ದಾರೆ.