ಬಾಗಲಕೋಟೆ; ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು.
ಬಾಗಲಕೋಟೆಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ರಾಜ್ಯಪಾಲರ ಪ್ರತಿಕೃತಿ ದಹನ ಮಾಡಲಾಗಿದೆ. ಆಗ ಕೈ ಕಾರ್ಯಕರ್ತ ದ್ಯಾಮಪ್ಪ ಪರಸಪ್ಪ ಮಾಗಿ ಎಂಬವರಿಗೆ ಬೆಂಕಿ ತಗುಲಿದೆ.ಬಾದಾಮಿ ತಾಲೂಕಿನ ನಾಗರಾಳ ಎಸ್ಪಿ ಗ್ರಾಮದ ನಿವಾಸಿಯಾಗಿದ್ದಾರೆ ದ್ಯಾವಪ್ಪ.ಬೆಂಕಿಯ ಕೆನ್ನಾಲಿಗೆಯಿಂದ ಅವರ ಮುಖ ಹಾಗೂ ಭುಜದ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಈ ವೇಳೆ ಹನಮಂತ ಎಂಬರಿಗೂ ಸಣ್ಣ ಪ್ರಮಾಣದ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಬೆಂಕಿ ನಂದಿಸಿ ಗಾಯಾಳುಗಳನ್ನು ಕೈ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಎಕ್ಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರ ಕಾನೂನು ಬಾಹಿರ ನಿರ್ಣಯ ಖಂಡಿಸಿ ಬಾಗಲಕೋಟೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ದ್ಯಾಮಪ್ಪ ಎಂಬ ನನ್ನ ಅಭಿಮಾನಿಯೊಬ್ಬರು ಗಾಯಗೊಂಡ ವಿಚಾರ ಈಗಷ್ಟೆ ತಿಳಿಯಿತು. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ನನ್ನ ಮತ್ತು ನಮ್ಮ ಪಕ್ಷದ ಪರವಾಗಿ ಇಂದು ಹೋರಾಟ ನಡೆಸುತ್ತಿರುವ ನನ್ನೆಲ್ಲ ಆತ್ಮೀಯ ಬಂಧುಗಳು ಪ್ರತಿಭಟನೆಯ ವೇಳೆ ದಯವಿಟ್ಟು ಎಚ್ಚರಿಕೆಯಿಂದಿರಿ. ನಿಮ್ಮ ಕಾಳಜಿ, ಆಕ್ರೋಶವನ್ನು ನಾನು ಅರ್ಥೈಸಿಕೊಳ್ಳಬಲ್ಲೆ ಆದರೆ ನನಗೆ ನಿಮ್ಮೆಲ್ಲರ ಆರೋಗ್ಯ, ಜೀವವೂ ಮುಖ್ಯ. ನಿಮ್ಮ ಪ್ರೀತಿಗೆ ನಾನು ಸದಾ ಋಣಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಎಂ ಪ್ರಾಸಿಕ್ಯೂಷನ್ ವಿರೋಧಿಸಿ ನಡೆಸುತ್ತಿದ್ದ ಸುದ್ದಿಗೋಷ್ಠಿ; ಪ್ರೆಸ್ ಮೀಟ್ ಮಾಡುತ್ತಲೇ ಹೃದಯಾಘಾತವಾಗಿ ವ್ಯಕ್ತಿ ಸಾವು
ಸಿಎಂ ಪ್ರಾಸಿಕ್ಯೂಷನ್ ವಿರೋಧಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಇನ್ನು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರೋದನ್ನು ಪ್ರಶ್ನಿಸಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಹಮ್ಮಿಗೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಕಾಂಗ್ರೆಸ್ ಕಾರ್ಯಕರ್ತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಂಘದ ಸದಸ್ಯ ಸಿ.ಕೆ.ರವಿಚಂದ್ರನ್ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಸಿ ಕೆ ರವಿಚಂದ್ರನ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಅಲ್ಲೇ ಸಮೀಪದಲ್ಲಿ ಇರುವ ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆ ತಲುವಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನು ಕೆ ಸಿ ರವಿಚಂದ್ರನ್ ಸಾವಿಗೆ ಸಿಎಂ ಸಿದ್ದರಾಮಯ್ಯ ಸಾಂತ್ವನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಆದೇಶ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಂಘದ ಸದಸ್ಯ, ನಮ್ಮ ಪಕ್ಷದ ಕಾರ್ಯಕರ್ತ ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯಿತು. ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿನ ಈ ಹೋರಾಟದಲ್ಲಿ ನಮ್ಮ ಜೊತೆಯಾಗಿದ್ದ ರವಿಚಂದ್ರನ್ ಅವರ ನಿಧನ ಅತೀವು ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಸ್ಥರು ಮತ್ತು ಬಂಧುಬಳಗದ ಜೊತೆ ನಾನಿದ್ದೇನೆ ಎಂದಿದ್ದಾರೆ.