ಮನೆ Latest News ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆ

0

 

ಬೆಂಗಳೂರು : ಸ್ಯಾಂಡಲ್ ವುಡ್ ಗೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ.ಒಂದರ ಮೇಲೆ ಒಂದು ಕೆಟ್ಟ ಸುದ್ದಿಗಳು ಕೇಳಿ ಬರುತ್ತಲೇ ಇದೆ. ಸಾಲು ಸಾಲು ಡಿವೋರ್ಸ್, ಕೊಲೆ ಪ್ರಕರಣ ಸದ್ದು ಮಾಡುತ್ತಿರುವ ಚಂದನವನದಲ್ಲಿ ಈಗ ಸಾವಿನ ಸುದ್ದಿಯೊಂದು ಬರ ಸಿಡಿಲಿನಂತೆ ಬಂದಿರಗಿದೆ.

ಹೌದು ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ನಾಗರಬಾವಿಯ ತಮ್ಮ ನಿವಾಸದಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಸಾಲದ ಸುಳಿಗೆ ಸಿಲುಕಿದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ವರ್ಷಗಳಿಂದಲೂ ಅವರ ಸಿನಿಮಾ  ಶೂಟಿಂಗ್ ಕುಂಟುತ್ತಲೇ ಸಾಗಿತ್ತು. ಹಾಗಾಗಿ ಸಿನಿಮಾ ನಿರ್ಮಾಪಕರಾಗಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದರು ವಿನೋದ್ ಎನ್ನಲಾಗಿದೆ. ಇದೇ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ಮಾತನಾಡಿ ವಿನೋದ್ ಮನೆಗೆ ಹಿಂತಿರುಗಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಇಂದು ವಿನೋದ್ ದೊಂಡಾಲೆ ನೇಣಿಗೆ ಕೊರಳೋಡಿದ್ದಾರೆ. ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ವಿನೋದ್ ದೊಂಡಾಲೆ ನಿಧನಕ್ಕೆ ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಸಂತಾಪ ಸೂಚಿಸಿ ಪೋಸ್ಟ್ ಒಂದನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ನನ್ನ ತಂಡದಲ್ಲಿ ಅನೇಕ ವರ್ಷಗಳ ಕಾಲ ನಿರ್ದೇಶನ ವಿಭಾಗ ದಲ್ಲಿ ಇದ್ದ, ಅತ್ಯಂತ ಪ್ರತಿಭಾವಂತ, ಸೌಜನ್ಯದ ಗಣಿ, ವಿನೋದ ಧೋಂಡಾಲೆ ಇನ್ನಿಲ್ಲ.

ಅವರ ಎರಡು ಧಾರಾವಾಹಿಗಳು ಕರಿಮಣಿ, ಗಂಗೆ ಗೌರಿ ತುಂಬಾ ಜನಪ್ರಿಯವಾಗಿ ನಡೆಯುತ್ತಿದ್ದವು.ಇನ್ನೊಂದು ಚಿತ್ರ ಅರ್ಧದಷ್ಟು ಮುಗಿದಿದೆ.ನನ್ನ ಮಗಳು ಜಾನಕಿಯ ಮೊದಲ ಐದು ಎಪಿಸೋಡಿನ ತಾಂತ್ರಿಕ ನಿರ್ದೇಶನ ಮಾಡಿದ್ದರು.ಮುಕ್ತ, ಮುಕ್ತ ಮುಕ್ತ ಧಾರಾವಾಹಿಗಳಿಗೆ ಅವನೇ ಎಪಿಸೋಡ್ ನಿರ್ದೇಶಕ.ಅವನು ಷಾಟ್ ಗಳನ್ನು ವಿನ್ಯಾಸ ಮಾಡುತ್ತಿದ್ದ ಬಗೆಯೇ ಅನನ್ಯ.

ಮರ್ಯಾದೆಗೆ ಅಂಜುವ ಮನುಷ್ಯ.ಯಾರಿಗೂ ಎಂದಿಗೂ ಜೋರಾಗಿ, ಕೋಪದಿಂದ ಮಾತನಾಡಿದ್ದು ನಾನು ಕಂಡಿಲ್ಲ.ಎಂದೂ ಗಾಸಿಪ್ ಮಾಡುವ ಜಾಯಮಾನ ಇರಲೇ ಇಲ್ಲ ಒತ್ತಡ ಮಾಡಿಕೊಳ್ಳಬಾರದೆಂದು ನನಗೆ ಅನೇಕ ಬಾರಿ ಸಮಾಧಾನ ಹೇಳಿದ್ದ ಮನುಷ್ಯ ಇಂದು ಬಹುಶಃ ಒತ್ತಡ ತಡೆಯಲಾರದೆ ಬದುಕು ಮುಗಿಸಿಕೊಂಡುಬಿಟ್ಟ. ಚಿಕ್ಕ ವಯಸ್ಸು.ಬದುಕಿಗೊಂದು ತರ್ಕವೇ ಬೇಡವೆ..ತೀರಾ ಸಂಕಟವಾಗುತ್ತದೆ.ಅಂತಿಮ ನಮನಗಳು ವಿನು ಎಂದಿದ್ದಾರೆ.