ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಅವರ ಅನೇಕ ಸ್ನೇಹಿತರು ಈಗಾಗಲೇ ಜೈಲಿಗೆ ತೆರಳಿ ಭೇಟಿ ಮಾಡಿದ್ದಾರೆ. ಹೀಗಿರುವಾಗ ಅವರ ಆಪ್ತ ನಿರ್ದೇಶಕ ತರುಣ್ ಸುಧೀರ್ ಯಾಕೆ ಇನ್ನೂ ದರ್ಶನ್ ಅವರನ್ನು ಭೇಟಿಯಾಗಲು ಬಂದಿಲ್ಲ, ಅವರು ಮದುವೆಯಾಗ್ತಿದ್ದಾರೆ ಅದಕ್ಕೆ ಕಾರಣ ದರ್ಶನ್. ಹೀಗಿದ್ರೂ ಇನ್ನು ಯಾಕೆ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಇವತ್ತು ತರುಣ್ ಸುಧೀರ್ ತನ್ನ ಆಪ್ತ ಮಿತ್ರನ ಭೇಟಿಗಾಗಿ ಬಂದೇ ಬಿಟ್ಟಿದ್ದರು.
ಇನ್ನು ದರ್ಶನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು , ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಾಧ್ವಾಗದೇ ಸಂಜೆಯಾಗುತ್ತಿದ್ದಂತೆ ದರ್ಶನ್ ಅವರಿಗೆ ಜ್ವರ ಬರುತ್ತಿತ್ತು. ಆದರೆ ಈಗ ಅವರು ಚೇತರಿಸಿಕೊಂಡಿದ್ದಾರೆ. ಏನಿಲ್ಲ ಈಗ ಆರಾಮಗಿದ್ದೇನೆ ಮಗ ಅಂತಾ ನನ್ನ ಬಳಿ ಹೇಳಿದ್ರು. ಇನ್ನು ನನ್ನ ವಿವಾಹದ ವಿಚಾರ ಅವರಿಗೆ ಮೊದಲೇ ಗೊತ್ತಿತ್ತು. ನನಗೆ ಅವರು ಇಲ್ಲದ ಸಮಯದಲ್ಲೇ ಮದುವೆಯಾಗುವಂತಾಯ್ತಲ್ವಾ ಅನ್ನೋ ಕೊರಗು ಇತ್ತು. ಆದರೆ ಮದುವೆ ವೇಳೆ ನಾನು ಬರ್ತಿನಿ ಅಂತಾ ಅವರೇ ಹೇಳಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ನನಗೆ ಇದೆ.ಹಾಗೆ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಂದು ತರುಣ್ ಹೇಳಿದ್ದಾರೆ.
ಇದರ ಮಧ್ಯೆ ಪೆರೋಲ್ ಮೇಲೆ ಅಂದರೆ ಸ್ಪೆಷಲ್ ಪರ್ಮಿಷನ್ ಮೇಲೆ ಡಿ ಬಾಸ್ ನಿಮ್ಮ ಮದುವೆಗೆ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಅಷ್ಟೋತ್ತಿಗೆ ಅವರು ಜೈಲಿನಿಂದ ರಿಲೀಸ್ ಆಗಿ ಬರ್ತಾರೆ ಅಂದಿದ್ದಾರೆ. ಇನ್ನು ಜೈಲಿನಲ್ಲಿ ಆಹ್ವಾನ ಪತ್ರಿಕೆ ನೀಡೋದಕ್ಕೆ ಅವಕಾಶವಿಲ್ಲ. ಆದರೆ ನಾನು ಅವರ ಆಶೀರ್ವಾದ ಪಡೆದುಕೊಂಡೆ. ಜೈಲಿನಲ್ಲಿ ನಟ ದರ್ಶನ್ ಸ್ವಲ್ಪ ತೂಕ ಕಡಿಮೆಯಾಗಿ ಸಣ್ಣಗಾಗಿದ್ದಾರೆ ಎಂದು ತರುಣ್ ಹೇಳಿದ್ದಾರೆ.
ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 1ರವರೆಗೆ ವಿಸ್ತರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಅವರನ್ನು ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರ ಮುಂದೆ ಮಧ್ಯಾಹ್ನದ ಬಳಿಕ ಹಾಜರುಪಡಿಸಲಾಯಿತು.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರಿನ ಕೇಂದ್ರ ಕಾರಾಗೃಹದಲ್ಲಿರುವ 4 ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಜೈಲಾಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು ಆರೋಪಿಗಳಿಗೆ ಆಗಸ್ಟ್ 1 ರವರೆಗೆ ಅಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶವನ್ನು ನೀಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮತ್ತೆ ಒಂದಷ್ಟು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪವಿತ್ರ ಗೌಡ ಸ್ನೇಹಿತ ಸಮತಾ ಗೌಡ, ಆರೋಪಿ ಪ್ರದೂಶ್ ಸ್ನೇಹಿತ ಕಾರ್ತಿಕ್ ಪುರೋಹಿತ್, ದರ್ಶನ್ ಅವರಿಗೆ ಹಣದ ಸಹಾಯ ಮಾಡಿದ ಮಾಜಿ ಉಪಮೇಯರ್ ಮೋಹನ್ ರಾಜ್, ದರ್ಶನ್ ಅವರ ಡೆವಿಲ್ ಸಿನಿಮಾದ ನಿರ್ದೇಶಕರಾದ ಮಿಲನ ಪ್ರಕಾಶ್ ಇವರಿಗೆಲ್ಲಾ ನೋಟಿಸ್ ನೀಡಿ ತನಿಖಾಧಿಕಾರಿ ಚಂದನ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅದರಂತೆ ಅವರೆಲ್ಲಾ ವಿಚಾರಣೆಗೆ ಹಾಜರಾಗಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದುವರೆಗೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಆರೋಪಿಗಳು ಬೇಲ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾಗಿ ಸದ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗದೇ ಆರೋಪಿಗಳು ಬೇಲ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಆರೋಪಿಗಳ ಪರವಾದ ವಕೀಲರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಅಲ್ಲಿಯವರೆಗೆ ಆರೋಪಿಗಳೇ ಜೈಲೇ ಗತಿ.