ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 15 ಜನರು ಮೃತಪಟ್ಟಿದ್ದಾರೆ ಎಂದು ಕಾರವಾರ-ಅಂಕೋಲ ಬಿಜೆಪಿ ಶಾಸಕ ಸತೀಶ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗುಡ್ಡ ಕುಸಿತದಲ್ಲಿ ಲ್ಲಿ 15 ಜನರು ಮೃತಪಟ್ಟಿರುವ ಬಗ್ಗೆ ಸ್ಪಷ್ಟ ಮಾಹಿತಿ ಇದೆ ಎಂದರು. ದುರಂತದಲ್ಲಿ ಸಾವಿನ ಪ್ರಮಾಣ 15 ಕ್ಕೂ ಹೆಚ್ಚು ಆಗಬಹುದು ಹೊರತು ಅದಕ್ಕಿಂತ ಕಡಿಮೆ ಆಗೋ ಸಾಧ್ಯತೆಯಿಲ್ಲ ಎಂದಿದ್ದಾರೆ. ಅಲ್ಲದೇ ಘಟನಾಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಚಿವರು ಬರಬೇಕು ಎಂದು ಆಗ್ರಹಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಹೋದಾಗ ತೀವ್ರ ನೋವಾಯಿತು ಎಂದು ಅವರು ಹೇಳಿದ್ದಾರೆ.
ಇನ್ನು ನಮಗೆ ಸರ್ಕಾರ ಕೊಡೋ ತಾತ್ಕಾಲಿಕ ಪರಿಹಾರ ಬೇಡ. ಕಾರವಾರ ಅಂಕೋಲಾ ಕ್ಷೇತ್ರದ ಜನರಿಗೆ ಒಂದು ಶಾಶ್ವತ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ದಯವಿಟ್ಟು ನನ್ನ ಕ್ಷೇತ್ರದ ಜನರ ರಕ್ಷಣೆಗೆ ಮುಂದಾಗಬೇಕು. ಪ್ರತಿ ವರ್ಷ ಮಳೆ ಬಂದಾಗ ಇದೇ ರೀತಿ ಸಂಕಷ್ಟ ಎದುರಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಬಳಿ ಕಾರವಾರ ಅಂಕೋಲ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮನವಿ ಮಾಡಿದ್ದಾರೆ.
ಇನ್ನು ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣು ಪಾಲಾಗಿದ್ದವರಲ್ಲಿ 7 ಜನರ ಮೃತದೇಹಗಳು ಪತ್ತೆಯಾಗಿದೆ. ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಅವರ ಪತ್ನಿ ಶಾಂತಿ, ಹಾಗೂ ಪುತ್ರ ರೋಷನ್ ,ಸೇರಿ ಟ್ರಕ್ ಚಾಲಕನ ಮೃತದೇಹವನ್ನು ಮೊನ್ನೆ ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದರು. ಒಂದೇ ಕುಟುಂಬದ ಮೂವರ ಮೃತದೇಹ ಗೋಕರ್ಣ ಬಳಿ ಪತ್ತೆಯಾಗಿತ್ತು.
ಇಂದು ಮತ್ತೆ ಮೂವರ ಮೃತದೇಹ ಪತ್ತೆಯಾಗಿದೆ.ಲಕ್ಷ್ಮಣ್ ನಾಯ್ಕ್ ಅವರ ಪುತ್ರಿ 5 ವರ್ಷದ ಅವಂತಿಕಾ ಮೃತದೇಹ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಅಲ್ಲದೇ ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ (45) ಹಾಗೂ ಲಾರಿ ಚಾಲಕ ಚಿನ್ನ (55) ಶವ ಪತ್ತೆಯಾಗಿದೆ. ಇಬ್ಬರು ಚಾಲಕರ ಮೃತದೇಹ ಅಂಕೋಲ ತಾಲೂಕಿನ ಮಂಜಗೋಣಿ ಬಳಿ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ.ಸ್ಥಳದಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಘಟನೆಯಲ್ಲಿ ಟ್ಯಾಂಕರ್ ಒಂದು ನೀರು ಪಾಲಾಗಿರೋದರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ಅವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಇನ್ನು ಈ ರೀತಿ ಗುಡ್ಡ ಕುಸಿಯೋದಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಅಂತಾ ರಾಜ್ಯ ಸರ್ಕಾರ ಆರೋಪ ಮಾಡಿದೆ. ವಿಧಾನಮಂಡಲ ಅಧಿವೇಶನದಲ್ಲಿ ಅಂಕೋಲ ಅಪಘಾತದ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದೆ. ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣ ಮಟ್ಟದ ಕ್ಯಾಂಟೀನ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.