ಉತ್ತರಕನ್ನಡದಲ್ಲಿ ವರುಣನ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುದೊಡ್ಡ ಅನಾಹುತ ಸಂಭವಿಸಿದೆ.
ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಹೆದ್ದಾರಿ ಪಕ್ಕದ ಅಂಗಡಿ, ಮನೆಗಳಲ್ಲಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಲಾರಿ ಸೇರಿದಂತೆ ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ. ಅಲ್ಲದೇ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಒಂದು ತೇಲಿ ಹೋಗಿದೆ ಎಂದು ಹೇಳಲಾಗಿದೆ.
ಇನ್ನು ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.ರಸ್ತೆ ಬ್ಲಾಕ್ ಆಗಿ ಬೆಂಗಳೂರಿನಿಂದ ಕರಾವಳಿಗೆ ತೆರಳುವ ಬಸ್ ಗಳು ಸಾಲು ಗಟ್ಟಿ ನಿಂತಿದ್ದು, ಪ್ರಯಾಣಿಕರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ರಸ್ತೆ ಕಾಮಗಾರಿ ನಿರ್ವಹಿಸಿಕೊಂಡ ಆರ್. ಎನ್. ಎಸ್ ಕಂಪನಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಶಿರಸಿ ತಹಶೀಲ್ದಾರ್ ಸೇರಿ ಅನೇಕ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ.