ಮನೆ Latest News ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡೋದು ಭಗವಾನ್ ರಾಮನಿಗೆ ಮಾಡುವ ಅವಮಾನ; ಕೇಂದ್ರ ಸಚಿವ...

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡೋದು ಭಗವಾನ್ ರಾಮನಿಗೆ ಮಾಡುವ ಅವಮಾನ; ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

0

ಬೆಂಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡೋದು ಭಗವಾನ್ ರಾಮನಿಗೆ ಮಾಡುವ ಅವಮಾನ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವ ಪ್ರಸ್ತಾಪವನ್ನು ವಿರೋಧಿಸಿರುವ ಅವರು ನಾನು ಮುಖ್ಯಮಂತ್ರಿಯಾದರೆ ಈ ಯೋಜನೆಯನ್ನು ವಾಪಾಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.ರಿಯಲ್ ಎಸ್ಟೇಟ್ ಅವಕಾಶಗಳನ್ನು ಬಳಸಿಕೊಳ್ಳೋದಕ್ಕಾಗಿ ಈ ರೀತಿ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂದೊಂದು ದಿನ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತೆ. ಆಗ ನಾನು ಮತ್ತೆ ಸಿಎಂ ಆಗುತ್ತೇನೆ ಅನ್ನೋ ವಿಶ್ವಾಸ ನನಗಿದೆ. ಆಗ ನಾನು ಒಂದು ವೇಳೆ ಬೆಂಗಳೂರು ದಕ್ಷಿಣವೆಂದು ನಾಮಕರಣವಾಗಿದ್ದರೆ ಅದನ್ನು ಬದಲಾಯಿಸಿ ಮತ್ತೆ ರಾಮನಗರವೆಂದೇ ಇಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಹೆಸರು ಬದಲಾವಣೆಯಿಂದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ.

 

ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ನಿಖಿಲ್ ಕುಮಾರಸ್ವಾಮಿ ವಿರೋಧ

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸೋದಕ್ಕೆ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೇವಲ ಕೆಲವರನ್ನು ಒಲಿಸಿಕೊಳ್ಳೋದಕ್ಕೆ ಸರ್ಕಾರ ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲು ಹೊರಟಿದೆ ಎಂದು ನಿಖಿಲ್ ಕಿಡಿಕಾರಿದ್ದಾರೆ.

ಇತಿಹಾಸಿಕ ಹಿನ್ನೆಲೆ ಇರುವ  ರಾಮನಗರ ಹೆಸರನ್ನು ತೆಗೆದು ಹಾಕಿ, ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಕಾಂಗ್ರೆಸ್ ಯಾವ ಹಿಡೆನ್ ಅಜೆಂಡಾ ಹೊಂದಿದೆಯೋ ಗೊತ್ತಿಲ್ಲ. ಆದರೆ, ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ರಾಜಕೀಯವಾಗಿ ಬಹಳ ಎತ್ತರದಲ್ಲಿರುವ ರಾಮನಗರ ಜಿಲ್ಲೆಯನ ಹೆಗ್ಗುರುತನ್ನೇ ಸರ್ವನಾಶ ಮಾಡುವ  ಹುನ್ನಾರ ನಡೆದಿದೆ ಎಂದು ನಿಖಿಲ್ ಹೇಳಿದ್ದಾರೆ.ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯನವರು, ಈ ದೇಶದ ಪ್ರಧಾನಿಗಳಾಗಿದ್ದ ಹೆಚ್.ಡಿ.ದೇವೇಗೌಡರು, ಎರಡು ಬಾರಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಈಗ ಈ ಜಿಲ್ಲೆಯ ಹೆಸರು ಬದಲಿಸಲು ಹೊರಟ ಮಂದಿ ಮೊದಲು ಈ ಜಿಲ್ಲೆಯ  ಇತಿಹಾಸ ತಿಳಿದರೆ ಒಳ್ಳೆಯದು. ನಮ್ಮ ರಾಮನಗರ ನಮ್ಮ ಹೆಮ್ಮೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಹೆಸರು ಬದಲಿಸುವಂತೆ ರಾಮನಗರ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ನಿಯೋಗದಿಂದ  ಮನವಿ

ರಾಮನಗರ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.ಈ  ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿತು.12 ಶಾಸಕರಿದ್ದ ಡಿಕೆಶಿ ನೇತೃತ್ವದ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತು.

ಇನ್ನು ಭೇಟಿ ಬಳಿಕ ಮಾತನಾಡಿದ ಡಿಸಿಎಂ  ಡಿ ಕೆ ಶಿವಕುಮಾರ್ ನಮ್ಮ ರಾಮನಗರ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ನನ್ನ ನೇತೃತ್ವದಲ್ಲಿ ಭೇಟಿ ಮಾಡಿದ್ದೆವು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಈ ವೇಳೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದೇವೆ ಎಂದರು.

ನಾವೆಲ್ಲಾ ಬೆಂಗಳೂರಿನವರೇ. ಮೊದಲು ಬೆಂಗಳೂರು ಜಿಲ್ಲೆಗೇ ರಾಮನಗರ ಸೇರಿತ್ತು.ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು.ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ .ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಆಗಲಿದೆ.ಬಳಿಕ ಹೆಸರು ಬದಲಾವಣೆ ಆಗಲಿದೆ ಎಂದಿದ್ದಾರೆ. ಅಲ್ಲದೇ ಈಗಿರುವ ರಾಮನಗರವೇ ಹೆಡ್ ಕ್ವಾಟರ್ ಆಗಿರಲಿದೆ.ರಾಮನಗರ ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರಲಿವೆ ಎಂದರು.ಈ ವಿಚಾರವನ್ನ ಕ್ಯಾಬಿನೆಟ್‌ನಲ್ಲಿಟ್ಟು ಚರ್ಚೆ ಮಾಡ್ತೀವಿ ಎಂದು ಡಿಸಿಎಂ ಡಿ ಕೆ ಶಿವರುಮಾರ್ ಅವರು ಹೇಳಿದ್ದಾರೆ.

ಇನ್ನು  ದೊಡ್ಡಬಳ್ಳಾಪುರ, ರಾಮನಗರ, ಚನ್ನಪಟ್ಟಣ ಮಾಗಡಿ ಎಲ್ಲಾ ಬೆಂಗಳೂರು ಜಿಲ್ಲೆಗೆ ಸೇರಿತ್ತು ನಂತರ ಆಡಳಿತ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ.ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮಾಡಲಾಗಿದೆ.ರಾಮನಗರ ಜಿಲ್ಲೆ ಅಂತಾನೂ  ಮಾಡಲಾಯ್ತು .ರಾಮನಗರ ಜಿಲ್ಲೆ ಹಾಗೆ ಇರುತ್ತೆ, ಅದರ ಹೆಸರು ಮಾತ್ರ  ಬದಲಾಗುತ್ತದೆ.ವಿಶ್ವವೇ ಬೆಂಗಳೂರನ್ನ ನೋಡುತ್ತಿದೆ.ಹೆಸರು ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಕೊಡಲಾಗಿದೆ.

ರಾಮನಗರ, ಚನ್ನಪಟ್ಟಣ, ಮಾಗಡಿ ಮುಖಂಡರು ಬಂದು ನನ್ನ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಬೇಕು ಎಂದು ಹೇಳಿದ್ದಾರೆ.ನಂತರ ಅಭಿವೃದ್ಧಿ ಕೆಲಸಗಳು ಕೂಡ ಬೇಗ ಆಗಲಿವೆ.ಪಕ್ಕದಲ್ಲೆ ಆಂದ್ರ, ತಮಿಳುನಾಡು ಇದೆ.ಕೈಗಾರಿಕೆಗಳಿಗೂ ಅನುಕೂಲ ಆಗಲಿದೆ. ಬೆಂಗಳೂರು ಹೆಸರನ್ನ ಉಳಿಸಿಕೊಳ್ಳಲು ನಮ್ಮ ಪ್ರಯತ್ನ  ಆಗ್ತಾಯಿದೆ.ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಹಾರೋಹಳ್ಳಿ ತಾಲ್ಲೂಕುಗಳನ್ನ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲಾಗುತ್ತದೆ ಎಂದಿದ್ದಾರೆ.