ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ DC, CEO ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಜೊತೆ ಎರಡನೇ ದಿನವೂ ಸಭೆ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಡಕ್ ಸೂಚನೆ ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಪಾಲಿಸಿ ನಾವು ಮಾಡ್ತೀವಿ.ನೀವು ಮಾಸ್ಟರ್ ಪ್ಲಾನ್ ಸಿದ್ದಪಡಿಸಿಕೊಂಡು ಬನ್ನಿ ಎಂದು ಸೂಚನ ನೀಡಿದ್ದಾರೆ.
ರಾಜ್ಯದಲ್ಲಿ ಪ್ರವಾಸೋದ್ಯಮ ಅತ್ಯಂತ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಪಂಚತಾರಾ ಹೋಟೆಲ್ ಗಳು ಇಲ್ಲ. ವಿದೇಶಿ ಪ್ರವಾಸಿಗರು ಬಂದರೆ ಉಳಿದುಕೊಳ್ಳಲು ಆ ಗುಣಮಟ್ಟದ ಹೋಟೆಲ್ ಅಗತ್ಯವಿದೆ. ಅಲ್ಲದೇ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳಿಗೂ ವೇಗ ಸಿಗಲಿದೆ. ಹೀಗಾಗಿ ಈ ನಿಟ್ಟಿನಲ್ಲಿ ನೀವು ಮಾಸ್ಟರ್ ಪ್ಲಾನ್ ಸಿದ್ದಪಡಿಸಿಕೊಂಡು ಬನ್ನಿ ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಸೂಚನೆ ನೀಡಿದ್ದಾರೆ.
ಇನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಈ ವೇಳೆ ಕಲಿಕೆಯಿಂದ ದೂರ ಉಳಿದ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸಿ ಎಂದು ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಜಪ್ಪ ಎನ್ನುವ ಮೇಸ್ಟ್ರು ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ಶಾಲೆಗೆ ಸೇರಿಸದಿದ್ದರೆ ನಾನು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ಸಭೆಯಲ್ಲಿ ಬಾಲ್ಯದಲ್ಲಿ ಪಾಠ ಮಾಡಿದ ಶಿಕ್ಷಕರನ್ನ ಸಿಎಂ ನೆನೆದಿದ್ದಾರೆ. ಆ ಮೂಲಕ ಶಿಕ್ಷಣ ಎಷ್ಟು ಮುಖ್ಯ ಅನ್ನೋದನ್ನು ಸಿಎಂ ಹೇಳಿದ್ದಾರೆ. ಸಾಮಾಜಿಕ-ಆರ್ಥಿಕ ಕಾರಣದಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಕಾಳಜಿ ಇಟ್ಟು ಶಿಕ್ಷಣ ಒದಗಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಇನ್ನು ಸಿಎಸ್‌ಆರ್ ನೆರವಿನಲ್ಲಿ 2 ಸಾವಿರ ಶಾಲೆಗಳ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿರುವಂತೆ 2 ಸಾವಿರ ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳನ್ನು ಸಿಎಸ್‌ಆರ್ ಅಡಿಯಲ್ಲಿ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ.ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಕಾಯ್ದೆ ಪ್ರಕಾರ ಕಳೆದ ಸಾಲಿನಲ್ಲಿ 8163 ಕೋಟಿ ಕಡ್ಡಾಯವಾಗಿ ಸಿಎಸ್‌ಆರ್ ಅಡಿ ವೆಚ್ಚ ಮಾಡಬೇಕಾಗಿತ್ತು.ಖಾಸಗಿ ಕಂಪೆನಿಗಳು ಈ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಲಾಭ ಗಳಿಸಿವೆ.1190 ಕೋಟಿ ಕಳೆದ ವರ್ಷ ಸಿಎಸ್‌ಆರ್ ಅಡಿ ವೆಚ್ಚ ಮಾಡಿದ್ದು, ಶೇ.30ರಷ್ಟು ಮಾತ್ರ ಸಿಎಸ್‌ಆರ್ ಅಡಿ ಬಳಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.
ರಾಮನಗರ ಜಿಲ್ಲೆಯಲ್ಲಿ ಪೈಲೆಟ್ ಯೋಜನೆಯಾಗಿ ಆರಂಭಿಸಲಾಗಿದ್ದು,ಮೂರು ಪಂಚಾಯತ್‌ಗಳಿಗೆ ಒಂದು ಶಾಲೆಯಂತೆ ಈಗಾಗಲೇ 20 ಶಾಲೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.ಜಿಲ್ಲೆಯಲ್ಲಿ ಟೊಯೋಟಾ ಕಂಪೆನಿ ಒಂದೇ 20 ಕೋಟಿ ಸಿಎಸ್‌ಆರ್ ಅಡಿ ಒದಗಿಸಿದ್ದಾರೆ.ನಾವು 3 ಎಕರೆ ಜಮೀನು ಒದಗಿಸಬೇಕು.ಶಾಲೆಯ ಮಾದರಿಯನ್ನು ಮಾತ್ರ ನಾವು ಒದಗಿಸುತ್ತೇವೆ.ನಿರ್ಮಾಣ ಕಾರ್ಯವನ್ನು ಅವರೇ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.