ಬೆಂಗಳೂರು ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ರೂ ಪೊಲೀಸರು ಮಾತ್ರ ತನಿಖೆ ನಡೆಸುತ್ತಲೇ ಇದ್ದಾರೆ. ತನಿಖೆಯಲ್ಲಿ ಒಂದೊಂದೇ ವಿಚಾರಗಳು ಬಯಲಾಗುತ್ತಲೇ ಇದೆ. ಮೊನ್ನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಪವಿತ್ರ ಗೌಡ ಸ್ನೇಹಿತೆ ಸಮತಾಗೆ ಪೊಲೀಸರು ನೋಟಿಸಿದ್ದರು. ಇದೀಗ ಈ ಕೊಲೆ ಪ್ರಕರಣದಲ್ಲಿ ಪವಿತ್ರ ಗೆಳತಿ ಸಮತಾ ಪಾತ್ರ ಏನು ಅನ್ನೋದು ಗೊತ್ತಾಗಿದೆ.
ಹೌದು.. ಸಮತಾ ರೇಣುಕಾಸ್ವಾಮಿಯನ್ನು ಕೊಲೆ ಮಾಡಲು ಶಾಕ್ ಡಿವೈಸ್ ತರಲು ಆರೋಪಿ ನಾಗರಾಜ್ ಗೆ 3 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿದ್ದಳು ಅನ್ನೋದು ಗೊತ್ತಾಗಿದೆ. ಅಲ್ಲದೇ ಆರೋಪಿಗಳು ಕೂಡ ವಿಚಾರಣೆ ವೇಳೆ ಶಾಕ್ ಡಿವೈಸ್ ನಲ್ಲಿ ರೇಣುಕಾಸ್ವಾಮಿಗೆ ಶಾಕ್ ನೀಡಿರುವ ಬಗ್ಗೆ ಒಪ್ಪಿಕೊಂಡಿದ್ದರು. ಇನ್ನು ಸಮತಾ ಪವಿತ್ರ ಗೆಳತಿ ಮಾತ್ರವಲ್ಲದೇ ಆಕೆಯ ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದಳು ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಮೊದಲು ಹಾಗೂ ಕೊಲೆ ಮಾಡಿದ ನಂತರ ಕೂಡ ಸಮತಾ ಜೊತೆ ಪವಿತ್ರ ಅನೇಕ ಬಾರಿ ಫೋನ್ ನಲ್ಲಿ ಮಾತುಕತೆ ನಡೆಸಿದ್ದಾಳೆ ಅನ್ನೋ ಮಾಹಿತಿಯನ್ನು ದಾಖಲೆ ಸಮೇತ ಎಸ್ ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ.
ಇದರ ಮಧ್ಯೆ ಮೊನ್ನೆ ಸಮತಾ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು ಈ ವೇಳೆ ಪವಿತ್ರಾಳನ್ನು ಭೇಟಿಯಾಗದೇ ದರ್ಶನ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿತು. ಇದೀಗ ಸಮತಾ ಕೊಲೆ ಬಗ್ಗೆ ಮಾತನಾಡೋದಕ್ಕೆ ದರ್ಶನ್ ಅವರನ್ನು ಭೇಟಿಯಾಗಿದ್ದಳು ಎನ್ನಲಾಗಿದೆ. ಅಲ್ಲದೇ ಇನ್ನಷ್ಟು ವಿಚಾರಣೆಗಾಗಿ ಪೊಲೀಸರು ಸಮತಾಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಚಾರಣೆಗೆ ಹಾಜರಾದ ಡೆವಿಲ್ ಸಿನಿಮಾ ನಿರ್ದೇಶಕ ಮಿಲನ ಪ್ರಕಾಶ್
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೆವಿಲ್ ನಿರ್ದೇಶಕ ಮಿಲನ ಪ್ರಕಾಶ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು, ಅದರಂತೆ ನಿನ್ನೆ ಬಸವೇಶಅವರ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಡೆವಿಲ್ ನಿರ್ದೇಶಕ ಪ್ರಕಾಶ್ ಹಾಜರಾಗಿದ್ದರು. ಕೆಲವು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಒಂದಷ್ಟು ದಾಖಲೆಗಳ ಸಮೇತ ಇಂದು ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರಿಂದ ಇಂದು ಮತ್ತೆ ಅವರು ವಿಚಾರಣೆಗೆ ಹಾಜರಾಗಿದ್ದರು.
ಇವರಿಷ್ಟೇ ಅಲ್ಲದೇ ಇನ್ನು ಶಾಸಕ ರವಿ ಸುಬ್ರಮಣ್ಯ ಅವರ ಕಾರು ಚಾಲಕ ಎನ್ನಲಾದ ಕಾರ್ತಿಕ್ ಪುರೋಹಿತ್ ಎಂಬಾತನಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕಾರ್ತಿಕ್ ಆರೋಪಿ ಪ್ರದೂಷ್ ಗೆ ಆಪ್ತನಾಗಿದ್ದ ಎನ್ನಲಾಗಿದೆ. ಇದರ ಮಧ್ಯೆ ಮಾಜಿ ಉಪಮೇಯರ್ ಮೋಹನ್ ರಾಜ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ದರ್ಶನ್ ಅವರಿಗೆ ಮೋಹನ್ ರಾಜ್ 40 ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎಂಬ ಆರೋಪ ಹಿನ್ನೆಲೆ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆಯೂ ಮೋಹನ್ ರಾಜ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು ಎನ್ನಲಾಗಿದೆ. ಇದೀಗ ಮೋಹನ್ ರಾಜ್ಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಅದರಂತೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಮಾಡಿ ಉಪಮೇಯರ್ ವೋಹನ್ ರಾಜ್ ಹಾಜರಾಗಿದ್ದಾರೆ.ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿದ್ದಂತೆ ಪೊಲೀಸರಿಗೆ ಹಲವು ಅಚ್ಚರಿಯ ವಿಚಾರಗಳು ಗೊತ್ತಾಗುತ್ತಿವೆ.