ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲ. ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು. ಈ ವೇಳೆ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರು ಒಂದು ಪ್ರಕರಣದಲ್ಲಿ ಮಾತ್ರವೇ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ಆದರೆ ಉಳಿದ ಕೇಸ್ ಗಳಲ್ಲಿ ಅವರನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆ ಎಂದು ಹೈಕೋರ್ಟ್ ನ್ಯಾಯ ಪೀಠದ ಮುಂದೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, ಜಾಮೀನು ಅರ್ಜಿಯ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಎಸ್ಐಟಿಗೆ ಸೂಚನೆ ನೀಡಿದರು. ಅಲ್ಲದೇ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ಹಾಗಾಗಿ ಶೀಘ್ರವೇ ವಿಚಾರಣೆ ಅಗತ್ಯವಿಲ್ಲ ಎಂದು ಹೇಳುವ ಮೂಲಕ ನಿರೀಕ್ಷಣಾ ಜಾಮೀನು ಅರ್ಜಿಯನ್ನು 2 ವಾರಗಳ ಕಾಲ ಮುಂದೂಡಿದರು.ಅಲ್ಲಿಗೆ ಪ್ರಜ್ವಲ್ ರೇವಣ್ಣ ಅವರಿಗೆ ಪರಪ್ಪನ ಅಗ್ರಹಾರ ಜೈಲೇ ಸದ್ಯಕ್ಕೆ ಫಿಕ್ಸ್ ಎಂಬಂತಾಗಿದೆ.
ನಾಲ್ಕು ತಿಂಗಳಿಗೊಮ್ಮೆ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ತಿದ್ದ ಪ್ರಜ್ವಲ್
ಪ್ರಜ್ವಲ್ ವಿಚಾರಣೆ ಹಲವು ಭಯಾನಕ ವಿಚಾರಗಳು ಬಯಲಾಗಿವೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅನೇಕ ಹೆಣ್ಣಕ್ಕಳೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದರಿಂದ ಅವರಿಗೆ ಭಯ ಕಾಡುತ್ತಿತ್ತು ಅನ್ನೋದು ಗೊತ್ತಾಗಿದೆ. ಹಾಗಾಗಿ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಎಚ್ಐವಿ ಪರೀಕ್ಷೆಗೆ ಮಾಡಿಸಿಕೊಳ್ಳುತ್ತಿದ್ದರು ಅನ್ನೋದು ಗೊತ್ತಾಗಿದೆ.
ಇದು ಪ್ರಜ್ವಲ್ ಹಲವು ಮಹಿಳೆಯರ ಜತೆಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಅನ್ನೋ ಆರೋಪಕ್ಕೆ ಸಾಕ್ಷಿಯಂತಿದೆ. ಪ್ರಜ್ವಲ್ ಅವರ ವಿರುದ್ಧ ದಾಖಲಾದ 5 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುವಾಗ ಈ ವಿಚಾರ ಗೊತ್ತಾಗಿದೆ.
ಅಂದ್ಹಾಗೆ ಸೋಮವಾರ ಪ್ರಜ್ವಲ್ ರೇವಣ್ಣ ಅವರ ತಾಯಿ ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಾಯಿ ಭೇಟಿ ಬಳಿಕ ಪ್ರಜ್ವಲ್ ಮಂಕಾಗಿದ್ದಾರೆ ಎನ್ನಲಾಗಿದೆ. ಇತ್ತ ಇಬ್ಬರೂ ಮಕ್ಕಳು ಜೈಲು ಪಾಲಾಗಿರೋದು ಹೆತ್ತವರನ್ನು ಕಂಗೆಡಿಸಿದೆ.
ಮೊದಲ ಬಾರಿಗೆ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ರೇವಣ್ಣ
ರೇವಣ್ಣ ಅವರ ಎರಡೂ ಮಕ್ಕಳು ಸದ್ಯ ಜೈಲಿನಲ್ಲಿದ್ದಾರೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನಲ್ಲಿದ್ದಾರೆ. ಜುಲೈ 3 ರಂದು ಅವರನ್ನು ಭೇಟಿಯಾದ ರೇವಣ್ಣ ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ತಂದೆಯೂ ಕೂಡ ಮಗನ ಜೊತೆ ಜಾಮೀನು ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತ ಇನ್ನು 3 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸಷೆನ್ಸ್ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆ ಅವರು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇನ್ನೊಂದು ಕಡೆ ಮತ್ತೋರ್ವ ಪುತ್ರ ಸೂರಜ್ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಸ್ಗೆ ಸಂಬಂಧಿಸಿದಂತೆ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18 ರವರೆಗೆ ವಿಸ್ತರಿಸಿದೆ. ಮತ್ತೊಂದು ಕಡೆ ಇಬ್ಬರೂ ಮಕ್ಕಳು ಜೈಲು ಪಾಲಾಗಿರೋದು ರೇವಣ್ಣ ದಂಪತಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಹೇಗಾದರೂ ಮಾಡಿ ಇಬ್ಬರು ಮಕ್ಕಳು ಹೊರಗೆ ತರಲು ರೇವಣ್ಣ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.