ಮಂಗಳೂರು : ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಓರ್ವ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದಲ್ಲಿ ನಡೆದಿದೆ.
ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಅವರಲ್ಲಿ ರಾಜ್ ಕುಮಾರ್ ಎಂಬಾತನನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಚಂದನ್ ಕುಮಾರ್ (30) ಎಂಬಾತನ್ನು ಮಣ್ಣಿ ಅಡಿಯಿಂದ ಮೇಲಕ್ಕೆ ಎತ್ತಲಾಯಿತು. ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ.
ಅವರು ರಕ್ಷಣಾ ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಮಂಗಳೂರಿನ ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣಿನಲ್ಲಿ ಬಿಹಾರ್ ಮೂಲದ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇಬ್ಬರು ಕಾರ್ಮಿಕರನ್ನು ಇದೀಗ ಸಿಬ್ಬಂದಿ ಹೊರ ತೆಗೆದಿದ್ದಾರೆ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಚಂದನ್ ಕುಮಾರ್ ಎನ್ನುವ ಕಾರ್ಮಿಕನನ್ನು ಸಿಬ್ಬಂದಿ ಹೊರತೆಗೆದಿದ್ದರು. ಆದರೆ ಮಣ್ಣಿನ ಅಡಿಯಲ್ಲಿ ನಿತ್ರಾಣಗೊಂಡಿದ್ದ ಚಂದನ್ ಕುಮಾರ್ ಇದೀಗ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದ್ದಾರೆ. ಮೃತ ಕಾರ್ಮಿಕ ಬಿಹಾರ್ ಮೂಲದವನು ಎನ್ನಲಾಗಿದೆ.
ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು, ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ , ಎಸ್ ಡಿಆರ್ ಎಫ್ ಪಡೆಗಳು ದೌಡಾಯಿಸಿದ್ದು, ರಕ್ಷಣ ಕಾರ್ಯ ನಡೆಸಿದ್ದಾರೆ. ಆದರೆ ಓರ್ವನ ಜೀವ ಉಳಿಸಲು ಸಾಧ್ಯವಾಗಿಲ್ಲ. ಬಲ್ಮಠ ರಸ್ತೆ ಬದಿಯಲ್ಲಿ ಖಾಸಗಿ ನಿರ್ಮಾಣಕ್ಕೆ ಸಂಸ್ಥೆಗೆ ಸೇರಿದ ಜಾಗ ಇದಾಗಿದೆ.ರಿಟೇನಿಂಗ್ ವಾಲ್ ಹಾಗೂ ಹಾಕಲಾದ ಶೀಟ್ಗಳ ಮೇಲೆ ಮಣ್ಣು ಬಿದ್ದಿತ್ತು. ರಿಟೇನಿಂಗ್ ವಾಲ್ ಹಾಗೂ ಶೀಟ್ ಮಧ್ಯೆ ಕಾರ್ಮಿಕರು ಸಿಲುಕಿ ಕೊಂಡಿದ್ದರು.
ಇನ್ನು ಇಲ್ಲಿ ಸುಮಾರು 60 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಇಬ್ಬರು ಸಿಲುಕಿದ್ದರು. ಕಬ್ಬಿಣದ ಫ್ರೇಮ್ ಒಳಗೆ ಇರುವುದರಿಂದ ಸದ್ಯ ಪ್ರಾಣಾಪಾಯ ಇಲ್ಲ ಎನ್ನಲಾಗಿತ್ತು. ಮೊದಲು ಇಬ್ಬರಿಗೂ ಕುಡಿಯಲು ನೀರು ಪೂರೈಸಲಾಗಿತ್ತು.
ಮೂರು ತಾಸುಗಳಿಂದ ಮಣ್ಣಿನಡಿ ಸಿಲುಕಿರುವ ಕಾರ್ಮಿಕರಿಗೆ ವೈದ್ಯರ ತಂಡದಿಂದ ನಿಗಾ ಇರಿಸಿತ್ತು. ಇಷ್ಟೆಲ್ಲಾ ಮಾಡಿದರೂ ಓರ್ವನ ಜೀವ ಉಳಿಸಲು ಸಾಧ್ಯವಾಗಿಲ್ಲ.