ಬೆಂಗಳೂರು: ಶಿವಾಜಿನಗರ ಮೆಟ್ರೋ ಸ್ಟೇಷನ್ ಹೆಸರು ಬದಲಾವಣೆ ವಿಚಾರದ ಬಗ್ಗೆ ಬೆಂಗಳೂರಲ್ಲಿ ಗೃಹ ಸಚಿವ ಪರಮೇಶ್ವರ್ ಅವರನ್ನು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ತೀರ್ಮಾನಗಳನ್ನೆಲ್ಲ ಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರು ತಗೋತಾರೆ ಎಂದಿದ್ದಾರೆ.
ಫಡ್ನವೀಸ್ ಆಕ್ಷೇಪಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಬಗ್ಗೆ ಮಾತನಾಡಿ ಮೆಟ್ರೋ ವಿಚಾರ ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಚಾರ, ಸಿಎಂ, ಡಿಸಿಎಂ ತೀರ್ಮಾನ ಮಾಡ್ತಾರೆ. ಈಗ ಇದ್ದಕ್ಕಿದ್ದಂತೆ ಫಡ್ನವೀಸ್ ಅವರಿಗೆ ಯಾಕೆ ಕರ್ನಾಟಕ, ಬೆಂಗಳೂರು ಬಗ್ಗೆ ಆಸಕ್ತಿ ಬಂದಿದೆಯೋ ಗೊತ್ತಿಲ್ಲ ನನಗೆ ಎಂದಿದ್ದಾರೆ.
ಮದ್ದೂರು ವಿಚಾರ, ಸಿಟಿ ರವಿ ಬಳಿಕ ಯತ್ನಾಳ್ ಮೇಲೂ ಎಫ್ಐಆರ್ ವಿಚಾರದ ಬಗ್ಗೆ ಮಾತನಾಡಿ ರಾಜಕೀಯ ಮಾಡಬೇಡಿ ಅಂತ ನಾವು ಮೊದಲಿಂದಲೂ ಹೇಳ್ತಿದೀವಿ. ಪೊಲೀಸರು ಯಾರೇ ಕಾನೂನು ವಿರುದ್ಧ ನಡೆದುಕೊಂಡ್ರೂ ಕ್ರಮ ತಗೋತಾರೆ. ಮುಸ್ಲಿಂ ಆಗಿರಲಿ ಹಿಂದೂ ಆಗಿರಲಿ ಕಲ್ಲೆಸೆದರೆ ಪೊಲೀಸರು ಕ್ರಮತಗೋತಾರೆ. ಅದನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಆದ್ರೆ ಬಿಜೆಪಿಯವ್ರು ಅಲ್ಲಿಗೆ ಹೋಗಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ, ಮತ್ತೆ ಜನರನ್ನು ಎಬ್ಬಿಸಿದ್ದಾರೆ, ಇದು ಸರಿಯಲ್ಲ. ವೀರಾವೇಶದಲ್ಲಿ ಮಾತಾಡಿದ್ದಾರೆ, ಬಳಸಬಾರದ ಪದಗಳನ್ನು ಬಿಜೆಪಿಯವ್ರು ಬಳಸಿದ್ದಾರೆ. ಇದರಲ್ಲಿ ಅವರು ಏನು ಸಾಧನೆ ಮಾಡಿದಂತಾಯ್ತು?.ಇದೆಲ್ಲವನ್ನೂ ಬಿಜೆಪಿಯವ್ರು ರಾಜಕೀಯವಾಗಿ ಮಾತ್ರ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಮಂಡ್ಯ ಎಎಸ್ಪಿ ತಿಮ್ಮಯ್ಯ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿ ಆಂತರಿಕವಾಗಿ ಭದ್ರತಾ ಲೋಪಗಳು ಕಂಡು ಬಂದಿವೆ. ಭದ್ರತೆಯಲ್ಲಿ ಲೋಪಗಳು ಕಂಡು ಬಂದಾಗ ಇಲಾಖೆ ಕ್ರಮ ತಗೊಳ್ಳಲೇಬೇಕಲ್ಲ. ಇನ್ಸ್ಪೆಕ್ಟರ್ ಇರಲಿ ಸಬ್ ಇನ್ಸ್ಪೆಕ್ಟರ್ ಇರಲಿ ಲೋಪಗಳು ಕಂಡು ಬಂದರೆ ಕ್ರಮ ತಗೊಳ್ಳಲೇಬೇಕು.ಆಂತರಿಕವಾಗಿ ಭದ್ರತಾ ಲೋಪಗಳನ್ನು ಇಲಾಖೆ ಗಂಭೀರವಾಗಿ ನೋಡುತ್ತೆ, ಹಾಗಾಗಿ ಕ್ರಮ ಆಗಿದೆ. ಅವರ ಲೋಪ ಇದೆಯಾ ಇಲ್ವಾ ಅಂತ ನಾನು ಸ್ಪಷ್ಟೀಕರಣ ಕೊಡಕ್ಕಾಗಲ್ಲ.ಆಂತರಿಕವಾಗಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿಯೇ ಕ್ರಮ ತಗೊಂಡಿರ್ತಾರೆ. ಇಲ್ಲಿ ಕೂತು ನಾನು ತೀರ್ಮಾನ ಮಾಡಲು ಬರಲ್ಲ ಎಂದು ಎಎಸ್ಪಿ ತಿಮ್ಮಯ್ಯ ವರ್ಗಾವಣೆ ಬಗ್ಗೆ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಬಾನು ಮುಷ್ತಾಕ್ ರಿಗೆ ಭದ್ರತೆ ಒದಗಿಸಲು ಒತ್ತಾಯ ವಿಚಾರದ ಬಗ್ಗೆ ಮಾತನಾಡಿ ನಾವು ಭದ್ರತೆ ಕೊಟ್ಟೇ ಕೊಡ್ತೇವೆ.ಯಾರೂ ಇದನ್ನು ನಮಗೆ ಹೇಳಬೇಕಿಲ್ಲ, ಭದ್ರತೆ ಕೊಡ್ತೇವೆ, ತೊಂದರೆ ಇಲ್ಲ. ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿ ಸಡಿಲಿಕೆ ಬಗ್ಗೆ ಪರಿಶೀಲಿಸ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಏನಿದೆ ನೋಡ್ತಿದ್ದೇವೆ. ಎಲ್ಲ ಪರಿಶೀಲಿಸಿ ಪ್ರಸ್ತಾವನೆ ಕಳಿಸಲು ಡಿಜಿಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.











