ಶಿವಮೊಗ್ಗ : ಹೊಸ ಟಿಟಿ ಖರೀದಿಯ ಖುಷಿಯಲ್ಲಿ ಮನೆ ದೇವರ ದರ್ಶನಕ್ಕೆಂದು ತೆರಳಿ ವಾಪಾಸ್ಸಾಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ ಸಾವನ್ನಪ್ಪಿದ 13 ಜನರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದಲ್ಲಿ ನೆರವೇರಿಸಲಾಯಿತು.ಗ್ರಾಮದ ಹಿಂದೂ ರುದ್ರ ಭೂಮಿಯಲ್ಲಿ 13 ಜನರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ನಾಲ್ಕು ಅಂಬುಲೆನ್ಸ್ ನಲ್ಲಿ ಹುಟ್ಟೂರಿಗೆ ಮೃತ ದೇಹಗಳನ್ನು ಹುಟ್ಟೂರಿಗೆ ತರಲಾಯಿತು. ಮೃತದೇಹಗಳನ್ನು ಆಂಬ್ಯುಲೆನ್ಸ್ ನಲ್ಲಿ ತರುತ್ತಿದ್ದಂತೆ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾವಿರಾರು ಜನರು ಮೃತರ ಅಂತಿಮ ದರ್ಶನ ಪಡೆದರು. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಕೂಡ ಎಮ್ಮೆಹಟ್ಟಿಯ ಸರ್ಕಾರಿ ಶಾಲಾ ಆವರಣದಲ್ಲಿ ಮೃತರ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತಲಾ 50 ಸಾವಿರ ನೆರವು ನೀಡಿದರು.
ಘಟನೆಯ ವಿವರ
ಹೊಸ ಟಿಟಿ ಖರೀದಿಯ ಖುಷಿಯಲ್ಲಿ ಮನೆ ದೇವರ ದರ್ಶನಕ್ಕೆಂದು ತೆರಳಿ ವಾಪಾಸ್ಸಾಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ 13 ಜನ ಸಾವನ್ನಪ್ಪಿರುವ ಘಟನೆ ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿತ್ತು.
ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದ 13 ಜನ ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂಡು ತಮ್ಮ ಊರಿಗೆ ಮರಳುತ್ತಿದ್ದಾಗ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿಯಾಗಿದೆ. ಪರಿಣಾಮ ಟಿಟಿಯಲ್ಲಿದ್ದ 17 ಜನರಲ್ಲಿ 13 ಜನ ಸಾವನ್ನಪ್ಪಿದ್ದರು. 3 ಮಕ್ಕಳು ಸೇರಿದಂತೆ ಒಟ್ಟು 13 ಜನ ಸಾವನ್ನಪ್ಪಿದ್ದರು. ಪರಶುರಾಮ್ (45), ಭಾಗ್ಯ (40), ನಾಗೇಶ್(50), ವಿಶಾಲಾಕ್ಷಿ(50)ಸುಭದ್ರಾ ಭಾಯಿ(65), ಪುಣ್ಯ( 50), ಮಂಜುಳಾ ಭಾಯಿ( 57), ಚಾಲಕ ಆದರ್ಶ್ ( 23),ಮಾನಸ(24), ರೂಪಾ( 40),ಮಂಜುಳಾ( 50) ಮೃತ ದುರ್ದೈವಿಗಳು.
ಇನ್ನು ಅಪಘಾತದಲ್ಲಿ ಸಾವನ್ನಪ್ಪಿರುವ ಚಾಲಕ ಆದರ್ಶ್ ಅವರು ಒಂದು ತಿಂಗಳ ಹಿಂದೆ ಹೊಸ ಟಿಟಿ ಖರೀದಿಸಿದ್ದರು. ಹಾಗಾಗಿ ಕುಟುಂಬ ಸಮೇತ ದೇವರ ದರ್ಶನ ಹಾಗೂ ವಾಹನ ಪೂಜೆ ಮಾಡಿಸಲು ಮನೆ ದೇವರ ದರ್ಶನಕ್ಕೆ ತೆರಳಿದ್ದರು. ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇಗುಲದಲ್ಲಿ ವಾಹನ ಪೂಜೆ ಮಾಡಿಸಿ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಪಡೆದು ಊರಿಗೆ ಮರಳುತ್ತಿದ್ದರು. ಈ ವೇಳೆ ಇಂದು ಬೆಳಗ್ಗಿನ ಜಾವ ಅಪಘಾತವಾಗಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ ಹೊಡೆದು 13 ಜನ ಸಾವನ್ನಪ್ಪಿದ್ದರು. ಇನ್ನು ಟಿಟಿ ಮಾಲೀಕ ಹಾಗೂ ಚಾಲಕರಾಗಿರುವ ಆದರ್ಶ್ ವಾಹನ ಪೂಜೆ ಫೋಟೋಗಳನ್ನು ವಾಟ್ಸಾಫ್ ಸ್ಟೇಟಸ್ ಹಾಕಿಕೊಂಡಿದ್ದರು ಎಂದು ಅವರ ಸ್ನೇಹಿತ ಸಾಗರ್ ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ 13 ಜನ ಕುಟುಂಬಸ್ಥರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ.ಸಚಿವರ ಪರವಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊಟ್ರೇಶಪ್ಪ ಪರಿಹಾರ ವಿತರಿಸಿದ್ರು. ಇದರ ಮಧ್ಯೆ ಸರಕಾರ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇಲ್ಲದೇ ಇದ್ದರೆ ಅಂತ್ಯಸಂಸ್ಕಾರ ನೆರವೇರಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬದವರಿಗೆ ದುಃಖ ಸಹಿಸುವ ಪಡಿಸುವ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.