ಬೆಂಗಳೂರು; ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆ ಮರೆಸಿಕೊಂಡು ಕೊನೆಗೂ ಎಸ್ ಐಟಿ ಖೆಡ್ಡಾಗೆ ಬಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ಅವರ ಕರ್ಮಕಾಂಡ ಬಗೆದ್ದಷ್ಟು ಹೊರ ಬರುತ್ತಲೇ ಇದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪ್ರಜ್ವಲ್ ಅವರನ್ನು ಮೊನ್ನೆ ಮೂರನೇ ಪ್ರಕರಣದ ವಿಚಾರಣೆಗಾಗಿ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದೀಗ ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ನನ್ನು ಮೂರನೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಪಡಿಸುತ್ತಿದ್ದು, ಈ ವೇಳೆ ಸ್ಫೋಟಕ ವಿಚಾರವೊಂದು ಬಯಲಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರಿಗೆ ಕರೆ ಮಾಡಲು 15 ಸಿಮ್ ಗಳನ್ನು ಬಳಸುತ್ತಿದ್ದರು ಅನ್ನೋದು ಗೊತ್ತಾಗಿದೆ. ಒಂದಲ್ಲ ಒಂದು ಸಿಮ್ ಕಾರ್ಡ್ ಗಳನ್ನು ಬಳಸಿಕೊಂಡು ಪ್ರಜ್ವಲ್ ರೇವಣ್ಣ ಅವರು ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಸಿಐಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಪ್ರಜ್ವಲ್ ಅವರು ಕೊಡುತ್ತಿದ್ದ ಕಾಟ ತಾಳಲಾರದೇ ಮಹಿಳೆಯರು ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ರೆ ಪ್ರಜ್ವಲ್ ಅವರು ಇನ್ನೊಂದು ನಂಬರ್ , ಅದನ್ನು ಬ್ಲಾಕ್ ಮಾಡಿದ್ದೆ ಮತ್ತೊಂದು ನಂಬರ್ ಹೀಗೆ ಬೇರೆ ಬೇರೆ ನಂಬರ್ ನಿಂದ ಕರೆ ಮಾಡಿ ನಗ್ನ, ಅರೆನಗ್ನ ಸ್ಕ್ರೀನ್ ಶಾಟ್ ಗಳನ್ನು ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಫೋಟೋ, ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದರಂತೆ. ಇದೇ ಬೆದರಿಕೆ ಹೆದರಿ ಹೆದರಿಯೇ ಮಹಿಳೆಯರು ಮತ್ತೆ ಮತ್ತೆ ಪ್ರಜ್ವಲ್ ರೇವಣ್ಣ ಅವರ ಜಾಲದಲ್ಲಿ ಸಿಲುಕುತ್ತಿದ್ದರು ಎನ್ನಲಾಗಿದೆ. ತನ್ನ ಬಳಿ ಕೆಲಸ ಕೇಳಿಕೊಂಡು ಬಂದವರು, ಮಕ್ಕಳಿಗೆ ಸಹಾಯ ಕೇಳಿಕೊಂಡು ಬಂದವರು, ಸರ್ಕಾರಿ ಅಧಿಕಾರಿಗಳು, ಸಿನಿಮಾ ನಟಿಯರು, ನಿರೂಪಕಿಯರು ಹಾಗೂ ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್ ರೇವಣ್ಣ ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಮೊನ್ನೆಯಷ್ಟೇ ತಮ್ಮ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದರು.
ಇದರ ಮಧ್ಯೆ ಪ್ರಜ್ವಲ್ ರೇವಣ್ಣ ಅವರನ್ನು ಅವರ ವಿರುದ್ಧ ದಾಖಲಾಗಿದ್ದ ಮೂರನೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ಸದ್ಯ ಎಸ್ ಐಟಿ ಕಸ್ಟಡಿಯಲ್ಲಿದ್ದಾರೆ. ಇನ್ನು ಮೂರನೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ಅವರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಅವರ ಅವರ ತಂದೆಯ ಮನೆಯಲ್ಲಿ ಸ್ಥಳ ಮಹಜರು ನಡೆಸಿದ್ದರು.