ಬೆಂಗಳೂರು: ರಾಹುಲ್ ಗಾಂಧಿ ಪ್ರತಿಭಟನೆ ದಿನ ನಾವೂ ಕೆಲವು ಪ್ರಶ್ನೆ ಕೇಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ವಾಲ್ಮೀಕಿ ನಿಗಮದ ಹಣವನ್ನು ಬಳಸಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ. ನಾವೂ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಲಿದ್ದೇವೆ. ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ದೇಶದಲ್ಲಿ ಹೊಸ ವರಸೆ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ಅನ್ ಗೈಡೆಡ್ ಮಿಸೈಲ್ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಅಕ್ರಮ ನಡೆದಿರುವುದಕ್ಕೆ 100% ಪುರಾವೆ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಳಿ ಪುರಾವೆ ಇದ್ದಿದ್ದರೆ ನ್ಯಾಯಾಲಯಕ್ಕೆ ಕೊಟ್ಟು ಪ್ರಶ್ನೆ ಮಾಡಬಹುದಾಗಿತ್ತು. ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಂಡು ಹತಾಶರಾದಂತಿದೆ. ತಮ್ಮ ನಾಯಕತ್ವದ ಬಗ್ಗೆ ರಾಹುಲ್ ಗಾಂಧಿ ತಾವೇ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಕಪಟ ನಾಟಕ ಆರಂಭಿಸಿದ್ದಾರೆ. ರಾಹುಲ್ ಗಾಂಧಿಗೆ ಪ್ರಧಾನಿ ಸ್ಥಾನದಲ್ಲಿ ಮೋದಿಯವರನ್ನು ನೋಡಲು ಆಗುತ್ತಿಲ್ಲ. ದೇಶವನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗುವ ಕೆಲಸ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಡವಳಿಕೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ನಡವಳಿಕೆ. ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭವನ್ನು ಮತ್ತೆ ಸೃಷ್ಟಿ ಮಾಡಲು ಹೊರಟಂತಿದೆ ಎಂದಿದ್ದಾರೆ.
ಮಹದೇವಪುರ, ರಾಜಾಜಿನಗರದಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಅಧಿಕಾರಿಗಳೇ ಇದ್ದರು. ಹಾಗಾದರೆ ನಿಮ್ಮ ಅಧಿಕಾರಿಗಳ ಮೇಲೆ ನಂಬಿಕೆ ಇಲ್ವಾ?. ಎಲ್ಲಾ ಗೊತ್ತಿದ್ದೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿ ಮಾತಿಗೆ ಧ್ವನಿಗೂಡಿಸುತ್ತಿದ್ದಾರೆ. ಆಗಸ್ಟ್ 5 ರಂದು ರಾಹುಲ್ ಗಾಂಧಿ ಡ್ರಾಮಾ ಮಾಡಲು ಬರುತ್ತಿದ್ದಾರೆ. ಆಗಸ್ಟ್ 5 ರಂದು ವಿಧಾನಸೌಧದಲ್ಲಿ ಬಿಜೆಪಿ ಸಂಸದರು, ಶಾಸಕರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ. ರಾಹುಲ್ ಗಾಂಧಿ ಬರುತ್ತಾರೆ ಅಂತಾ ಫ್ರೀಡಂ ಪಾರ್ಕ್ ನಲ್ಲಿ ಮರ ಕಡಿದು ಕಾಪೌಂಡ್ ಒಡೆದು ಹಾಕಿದ್ದಾರೆ. ಇದಕ್ಕಾಗಿ ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರತಿಭಟನೆ ದಿನ ನಾವೂ ಕೆಲವು ಪ್ರಶ್ನೆ ಕೇಳಲಿದ್ದೇವೆ. ವಾಲ್ಮೀಕಿ ನಿಗಮದ ಹಣವನ್ನು ಬಳಸಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ. ನಾವೂ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಲಿದ್ದೇವೆ. ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.