ಬೆಂಗಳೂರು: ರಾಜ್ಯದಲ್ಲಿ ಯೂರಿಯಾ ಕೊರತೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಿಎಂ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಯೂರಿಯಾ ಕೊರತೆ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಿಎಂ ಮಾಡಿದ್ದಾರೆ.ರಸಗೊಬ್ಬರ ಈಗಾಗಲೇ ರಾಜ್ಯ ಸರ್ಕಾರದ ನಿರೀಕ್ಷೆ ಮೀರಿ ಬಂದಿದೆ.ಆದರೆ ಪೂರ್ವಾಪರ ಲೆಕ್ಕಾಚಾರ ಇಟ್ಟುಕೊಳ್ಳದೇ ಇವರ ವೈಪಲ್ಯ ಮುಚ್ಚಿಕೊಳ್ಳಲು ಮುಂದಾಗಿದ್ದಾರೆ.ಈ ಬಗ್ಗೆ ಬಿಜೆಪಿ ರಾಜ್ಯಾದ್ಯಂತ ಮುಂದಿನ ದಿನದಲ್ಲಿ ದೊಡ್ಡ ಹೋರಾಟ ನಡೆಸುತ್ತದೆ ಎಂದಿದ್ದಾರೆ.
ಸಿಎಂ ಹಾಗೂ ಡಿಸಿಎಂ ಇಂದು ಅನೇಕ ಅವೈಜ್ಞಾನಿಕ ತೀರ್ಮಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಪೂರಕವಾಗಿ ಇಲ್ಲದ ಯೋಜನೆ ಮಾಡಿದ್ದಾರೆ. ಅನೇಕ ರಾಜ್ಯದಲ್ಲಿ ವಿಫಲವಾಗಿರುವ ಪ್ರಾಜೆಕ್ಟ್ ಇಲ್ಲಿ ಮತ್ತೆ ಮುಂದುವರೆಸಿದ್ದಾರೆ. ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಕಂಪನಿಯನ್ನು ಸೇರಿಸಿಕೊಂಡು ಅತುರವಾಗಿ ಹೊರಟಿದ್ದಾರೆ ಡಿ.ಕೆ. ಶಿವಕುಮಾರ್. ಇದರ ಹಿಂದಿನ ಉದ್ದೇಶ ಏನು ಅಂತ ತಿಳಿಸಬೇಕು.ಅನೇಕ ವಿಚಾರಗಳ ನಾವು ಇಂದು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವಿಭಜನೆ, ಅವೈಜ್ಞಾನಿಕ ಟನಲ್ ರಸ್ತೆಯ ತೀರ್ಮಾನಗಳು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿಲ್ಲ.ಬೆಂಗಳೂರನ್ನು ಐದು ಭಾಗಗಳಾಗಿ ವಿಂಗಡಿಸಿ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಈ ಯೋಜನೆಗಳಿಗೆ ಆತುರಾತುರವಾಗಿ ಟೆಂಡರ್ ಕರೆಯುತ್ತಿರುವುದು ಸರಿಯಲ್ಲ. ಸಾವಿರ ಸಾವಿರ ಮನೆಗಳು ಗೃಹ ಪ್ರವೇಶ ಮಾಡಲು ರೆಡಿ ಇದ್ದಾರೆ. ಆದರೆ ಆ ಮನೆಗಳಿಗೆ ಇವತ್ತು ಎನ್ಓಸಿಗಳು ಸಿಗುತ್ತಿಲ್ಲ. ಇದರ ಬಗ್ಗೆ ಸಿಎಂ ಆಗಲಿ, ಡಿಸಿಎಂ ಆಗಲಿ ಚಿಂತನೆ ಮಾಡಿಲ್ಲ. ರಸಗೊಬ್ಬರ ಕೊರತೆಯ ಬಗ್ಗೆ ಕೇಂದ್ರ ಸಚಿವರಿಗೂ ಪತ್ರ ಬರೆದಿದ್ದಾರೆ. ಈ ಬಾರಿ ಮುಂಗಾರು ಬೇಗನೇ ಆರಂಭವಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇಷ್ಟಿದ್ದರೂ ಕೃಷಿ ಇಲಾಖೆ ಯಾವುದೇ ಪೂರ್ವಸಿದ್ಧತೆ ಮಾಡಿಲ್ಲ. ಅದಕ್ಕಾಗಿ ರೈತರು ಇವತ್ತು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೊರತೆ ಇದೆ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಜುಲೈ ಅಂತ್ಯಕ್ಕೆ 8 ಲಕ್ಷದ 73 ಸಾವಿರ ಮೆಟ್ರಿಕ್ ಟನ್ ನಷ್ಟು ರಸಗೊಬ್ಬರ ರಾಜ್ಯಕ್ಕೆ ಬಂದಿದೆ. ನಮ್ಮ ನಿರೀಕ್ಷೆ ಇದ್ದಿದ್ದು ಆರು ಲಕ್ಷದ 31 ಸಾವಿರ ಮೆಟ್ರಿಕ್ ಟನ್. ಸರ್ಕಾರದ ಅಪೇಕ್ಷೆಗೂ ಮೀರಿ ಹೆಚ್ಚು ರಾಜ್ಯಕ್ಕೆ ರಸಗೊಬ್ಬರ ಬಂದಿದೆ. ಎಲ್ಲಿ ಬೇಡಿಕೆ ಹೆಚ್ಚಿದೆಯೋ ಅಲ್ಲಿ ರಸಗೊಬ್ಬರ ಸ್ಟಾಕ್ ಇಟ್ಟುಕೊಳ್ಳದೇ ರೈತರಲ್ಲಿ ಆತಂಕವನ್ನು ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ವೈಫಲ್ಯ, ಕೃಷಿ ಸಚಿವರ ವೈಫಲ್ಯ. ಇವರ ವೈಫಲ್ಯ ಮುಚ್ಚಿ ಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕೃಷಿ ಸಚಿವರು ಇದರ ಬಗ್ಗೆ ಎಚ್ಚರ ವಹಿಸಿ, ರೈತರಿಗೆ ರಸ ಗೊಬ್ಬರ ಒದಗಿಸಬೇಕು. ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ದುಪ್ಪಟ್ಟು ದರದಲ್ಲಿ ಮಾರುವ ಕಳ್ಳ ದಂಧೆ ಕೂಡಾ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಎಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೋ ಅಲ್ಲಿ ದಲ್ಲಾಳಿಗಳ ಕಾಟ ಇದ್ದೇ ಇರುತ್ತದೆ. ರಾಜ್ಯ ಸರ್ಕಾರದ ಪೂರ್ವ ತಯಾರಿ ಇಲ್ಲದ ಕಾರಣ ಎಲ್ಲಾ ಕಡೆ ಕಳ್ಳ ದಂಧೆ ನಡೆಯುತ್ತಿದೆ. ರೈತರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಅವರು ನಾಲ್ವಡಿ ಒಡೆಯರ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಅಂತಹ ಪುಣ್ಯಾತ್ಮರಿಗೆಲ್ಲಾ ತುಲನೆ ಮಾಡಿ ಈ ರೀತಿ ಅವರಿಗೆ ಅಪಮಾನ ಮಾಡುವ ಕೆಲಸ ಮಾಡಬಾರದು. ಸಿದ್ದರಾಮಯ್ಯ ಏನು, ಅವರ ವ್ಯಕ್ತಿತ್ವ ಏನೆಂದು ರಾಜ್ಯದ ಜನರು ನೋಡಿದ್ದಾರೆ. ಹುಚ್ಚು ಮಾತನ್ನು ಹೇಳಿ ಸಿದ್ದರಾಮಯ್ಯರನ್ನು ಅಟ್ಟಕ್ಕೆ ಏರಿಸುವ ಕೆಲಸ ಮಾಡಬಾರದು. ಇದರಿಂದ ಅವರಿಗೆ ಏನೂ ಪ್ರಯೋಜನ ಆಗಲ್ಲ, ಸಿದ್ದರಾಮಯ್ಯಗೂ ಏನೂ ಪ್ರಯೋಜನ ಆಗಲ್ಲ ಎಂದು ಹೇಳಿದ್ದಾರೆ.