ಬೆಂಗಳೂರು: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತಿಟ್ಟ ಪ್ರಕರಣವನ್ನು ಎಸ್ ಐಟಿಗೆ ವರ್ಗಾಯಿಸಿರುವ ಬಗ್ಗೆ ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ಉಜಿರೆಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿ ಬಂದು ಕೋರ್ಟ್ ನಲ್ಲಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಿದೆ. ನಿಷ್ಪಕ್ಷಪಾತ ತನಿಖೆ ಆಗಲಿ, ಸತ್ಯ ಹೊರಬರಲಿ, ಚರ್ಚೆಗೆ ತೆರೆ ಬೀಳಲಿ.ಎಸ್ ಐಟಿ ರಚನೆಯನ್ನು ಸ್ವಾಗತಿಸುತ್ತೇನೆ. ದಕ್ಷಿಣ ಭಾರತದಲ್ಲಿ ತಿರುಪತಿ ಮತ್ತು ಧರ್ಮಸ್ಥಳ ಹಿಂದೂಗಳಿಗೆ ಪವಿತ್ರ ಸ್ಥಳ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿನಿತ್ಯ ಅಪ್ ಲೋಡ್ ಮಾಡುತ್ತಿರುವವನು ಒಬ್ಬ ಮುಸ್ಲಿಂ ಯುವಕ. ಇದು ಕರ್ನಾಟಕಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರ. ಆದರೆ ಕೇರಳ ಸರ್ಕಾರ ಇದರಲ್ಲಿ ಯಾಕೆ ಮುತುವರ್ಜಿ ವಹಿಸುತ್ತಿದೆ?. ಕೇರಳದಲ್ಲಿ ಅಯ್ಯಪ್ಪ ದೇವಾಲಯ ಸೇರಿ ದೇವಸ್ಥಾನಗಳನ್ನು ಹೇಗೆ ನಡೆಸಿಕೊಂಡಿದೆ ಅಂತಾ ಗೊತ್ತಿದೆ ಎಂದಿದ್ದಾರೆ.
ಸಾವಿರಾರು ಜನ ಇಲ್ಲಿ ಕೊಲೆ ಮಾಡಿದ್ದಾರೆ ಅಂದರೆ ರಾಜ್ಯದಲ್ಲಿ ಸಾವಿರಾರು ಜನ ದೂರು ಕೊಟ್ಟಿರಬೇಕಲ್ವಾ?. ಏಕಾಏಕಿ ಹೇಗೆ ಇದು ಹೇಗೆ ಉದ್ಭವವಾಯಿತು?. 20 ವರ್ಷ ಆದ ಮೇಲೆ ಅವರಿಗೆ ಹೇಗೆ ಜ್ಞಾನೋದಯ ಆಯಿತು?. ಯಾವುದೋ ಒಂದು ಧರ್ಮಕ್ಕೆ ಅವಮಾನ ಮಾಡಬೇಕು ಅಂತಾ ಮಾಡುವುದು ಸರಿಯಲ್ಲ. ದಿನನಿತ್ಯ ಧರ್ಮಸ್ಥಳ ಅಂತಾ ಹೇಳಿ ಅಪಪ್ರಚಾರ ಮಾಡುವುದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ. ಯಾರು ತಪ್ಪು ಮಾಡಿದ್ದಾರೋ ಆ ವ್ಯಕ್ತಿ ಬಗ್ಗೆ ಮಾತಾಡಲಿ. ಸಂಸ್ಥೆ ಬಗ್ಗೆ ಮಾತಾಡಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲ ಪ್ರಹಾರ ಸರಿಯಲ್ಲ. ಎಸ್ ಐಟಿ ಸ್ಥಾಪನೆ ಬಗ್ಗೆ ಧರ್ಮಸ್ಥಳ ಕ್ಷೇತ್ರ ಕೂಡಾ ಸ್ವಾಗತಿಸಿದೆ. ಆರೋಪ ಮಾಡಿದ ವ್ಯಕ್ತಿ ಯಾರು ಅಂತಾ ಗೊತ್ತಾದರೆ ಪೂರ್ವಾಪರ ಎಲ್ಲವೂ ಗೊತ್ತಾಗುತ್ತದೆ. ಸಂಸ್ಥೆ ಮೇಲೆ ಆರೋಪ ಮಾಡಬಾರದು. ಸಾವಿರಾರು ವರ್ಷಗಳಿಂದ ಧರ್ಮಸ್ಥಳದ ಮಂಜುನಾಥ ಅಲ್ಲಿದ್ದಾನೆ. ಯಾರೂ ಧರ್ಮಸ್ಥಳವನ್ನು ಗುರಿ ಮಾಡಬೇಡಿ, ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಬಿಜೆಪಿಯವರು ನಾವು ಹೇಗೆ ನಡೆದುಕೊಳ್ಳಬೇಕು ಅಂತಾ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ನನಗಿಂತ ದೈವಭಕ್ತರು. ನಾನು ಒಂದು ದೇವಸ್ಥಾನಕ್ಕೆ ಹೋದರೆ ಅವರು ನೂರು ದೇವಸ್ಥಾನಕ್ಕೆ ಹೋಗುತ್ತಾರೆ. ಅವರ ಹೆಸರು ಶಿವಕುಮಾರ, ನನ್ನ ಹೆಸರು ಅಶೋಕ. ಅವರು ದೇವರ ಹೆಸರು ಇಟ್ಟುಕೊಂಡಿದ್ದಾರೆ. ನನ್ನ ಹೆಸರು ಸಾಮ್ರಾಟನ ಹೆಸರು. ಅವರ ಹೃದಯದಲ್ಲಿ ಏನು ತೀರ್ಮಾನ ಮಾಡುತ್ತದೋ ಅದರಂತೆ ತೀರ್ಮಾನ ಮಾಡಲಿ. ಹಿಂದೂ ಅಂದ ಕೂಡಲೇ ಎಲ್ಲರೂ ಮಾತಾಡಲು ಶುರು ಮಾಡುತ್ತಾರೆ. ಅದೇ ನಮ್ಮ ದೌರ್ಭಾಗ್ಯ ಎಂದು ಬೇಸರ ಹೊರ ಹಾಕಿದ್ದಾರೆ.