ಧರ್ಮಸ್ಥಳ ದಲ್ಲಿ ಸರಣಿ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಎಸ್ ಐಟಿ ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ ಅಂತಾ ಸಿಎಂ ಹೇಳಿದ್ದಾರೆ. ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ .ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿವೆ. ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದೆ. ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದೆ. ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ ಎಂದಿದ್ದಾರೆ.
ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಅನುಮಾನಾಸ್ಪದ ಸಾವುಗಳ ಬಗ್ಗೆ ಎಸ್ಐಟಿ ತನಿಖೆ ಆಗಬೇಕು ಅಂತ ಒತ್ತಡ ಇತ್ತು. ದಕ್ಷಿಣ ಕನ್ನಡ ಪೊಲೀಸರು ತನಿಕೆಗೆ ಸಿದ್ದವಿದ್ದರು ಅವರ ಮೇಲೆ ನಮಗೂ ನಂಬಿಕೆ ಇತ್ತು. ಆದರೆ ಸಿಎಂ ಹಾಗೂ ಗೃಹ ಸಚಿವರು ಎಸ್ಐಟಿ ಆದೇಶ ಮಾಡಿದ್ದಾರೆ. ನಿಜಾಂಶ ಹೊರಗೆ ಬರಬೇಕು. ನೂರಾರು ಹೆಣ ಅಂತ ಹೇಳ್ತಿದ್ದಾರೆ ಇದರ ಸತ್ಯಾಂಶ ಹೊರಗೆ ಬರಬೇಕು.ಯಾವ ಸಾಕ್ಷಿದಾರ ಅವರ ಹಿನ್ನೆಲೆ ಏನು ಎಂಬುದರ ಹಿಂದೆ ಹೋಗಲು ಆಗುವುದಿಲ್ಲ. ಹೂತು ಹಾಕಿರುವ ಸ್ಥಳಕ್ಕೆ ಹೋಗಬೇಕು. ಫಾರೆನ್ಸಿಕ್ ತನಿಖೆ ಆಗಬೇಕು ಇದೆಲ್ಲವನ್ನೂ ನೋಡಬೇಕು. ಯಾರೋ ಒಬ್ಬರ ಮೇಲೆ ಮಾಡಿದ್ದೀವಿ ಅಂತ ಹೇಳಲು ಆಗುವುದಿಲ್ಲ. ಕೇವಲ ಸೌಜನ್ಯ ಕೇಸ್ ಮಾತ್ರವಲ್ಲ, ಎಲ್ಲವನ್ನೂ ಕೂಲಂಕುಷವಾಗಿ ತನಿಖೆ ಮಾಡಬೇಕು. ಎಸ್.ಐಟಿಯವರೇ ತನಿಖೆ ಮಾಡ್ತಾರೆ. ಸಾಕ್ಷಿದಾರ ಠಾಣೆಗೆ ಬಂದು ಹೇಳಿಕೆ ಕೊಟ್ಟು ಪ್ರಕರಣವನ್ನು ಮುಂದುವರಿಸಬಹುದಿತ್ತು. ಆದರೆ ಎಸ್ಐಟಿ ಮಾಡಲೇಬೇಕು ಎಂಬ ಒತ್ತಡ ಇತ್ತು ಎಂದಿದ್ದಾರೆ.
ಎಸ್ಐಟಿಯವರು ಎಲ್ಲವನ್ನೂ ಕೂಲಂಕುಷವಾಗಿ ತನಿಖೆ ಮಾಡ್ತಾರೆ. ಆದರೆ ಧರ್ಮಸ್ಥಳ ಪುಣ್ಯಕ್ಷೇತ್ರ, ಯಾರೂ ಅದನ್ನು ಗುರಿಯಾಗಿಟ್ಟುಕೊಂಡು ತೇಜೋವಧೆ ಮಾಡಬಾರದು. ಧರ್ಮಸ್ಥಳದಲ್ಲಿ ಮಂಜುನಾಥ ಇರುವ ಕ್ಷೇತ್ರ, ಜೈನ ಸಮುದಾಯದವರೂ ಇರುವ ಕ್ಷೇತ್ರ. ಹೀಗಾಗಿ ಕೆಲವರು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುತ್ತಿರಬಹುದು.ಆದರೆ ಜನರ ನಂಬಿಕೆಗಳಿಗೆ ಧಕ್ಕೆ ತರುವಂತ ತೇಜೋವಧೆ ಮಾಡುವ ಕೆಲಸ ಯಾರೂ ಮಾಡಬಾರದು. ತನಿಖೆಯ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ.ತನಿಖೆಯಿಂದ ಯಾರೂ ಪ್ರಭಾವಿಗಳನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ.ಸೌಜನ್ಯ ಇರಲಿ ಬೇರೆ ಅತ್ಯಾಚಾರ ಹತ್ಯೆ ಪ್ರಕರಣಗಳಿರಲಿ ನ್ಯಾಯ ಸಿಕ್ಕಿಯೇ ಸಿಗುತ್ತದೆ