ಬೆಂಗಳೂರು; ಬಿಜೆಪಿಗೆ ಅರ್ಧ ನಾರೀಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಮಂಗಳಮುಖಿ ಫೌಂಡೇಶನ್ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಅರುಂಧತಿ ಹೆಗ್ಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಗಳಮುಖಿ ಫೌಂಡೇಶನ್ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಅರುಂಧತಿ ಹೆಗ್ಗಡೆ ಬಿ.ಕೆ. ಹರಿಪ್ರಸಾದ್ ಅವರೇ ಕಾಂಗ್ರೆಸ್ ನಲ್ಲಿ ನಿಮ್ಮ ಸ್ಥಾನ ಮಾನ ಏನು ಅಂತಾ ಒಮ್ಮೆ ವಿಮರ್ಶೆ ಮಾಡಿಕೊಳ್ಳಿ. ಅವಕಾಶ ಕೊಟ್ಟರೆ ನಿಮ್ಮ ರಾಹುಲ್ ಗಾಂಧಿಯವರಿಗಿಂತ ಚೆನ್ನಾಗಿ ಕೆಲಸ ಮಾಡಿ ತೋರಿಸುತ್ತೇವೆ. ಮಂಗಳಮುಖಿ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು? ನಿಮ್ಮ ಮಾತುಗಳನ್ನು ಮಂಗಳಮುಖಿ ಸಮುದಾಯ ಯಾವತ್ತೂ ಕ್ಷಮಿಸಲ್ಲ. ನೀವು ಬೆಂಗಳೂರು ದಕ್ಷಿಣದಲ್ಲಿ ಚುನಾವಣೆಗೆ ನಿಂತು ಸೋತಿದ್ದೀರಾ. ನೀವು ನಾವು ಚುನಾವಣೆಗೆ ನಿಂತರೆ ನಿಮ್ಮಿಂದ ಎರಡು ಸಾವಿರ ಜಾಸ್ತಿ ಪಡೆಯುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಹರಿಪ್ರಸಾದ್ ಅವರೇ ನೀವು ಹುಟ್ಟುವ ಮೊದಲೇ ಕಿನ್ನರ ಸಮಾಜ ಇತ್ತು. ನಮ್ಮನ್ನು ಇಟ್ಟುಕೊಂಡು ನಿಮ್ಮ ರಾಜಕೀಯ ಎಷ್ಟು ಸರಿ? ನಾವೇನು ಪ್ರಾಣಿಗಳೇ?. ನೀವು ಕ್ಷಮೆ ಕೇಳದೇ ಇದ್ದರೆ ನಾವು ಬೇರೆ ರೀತಿಯ ಹೋರಾಟಕ್ಕೆ ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಬಿಜೆಪಿ ಮಂಗಳಮುಖಿ ಸಮುದಾಯಕ್ಕೆ ಪದ್ಮಶ್ರೀ ಪ್ರಶಸ್ತಿ ಕೊಟ್ಟು ಮಂಜಮ್ಮ ಜೋಗತಿ ಅವರನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾಡಿದೆ. ನಿಮ್ಮ ಪಕ್ಷದಲ್ಲಿ ಮಹಿಳೆಯರಿಗೆ ನೀವು ಯಾವ ಸ್ಥಾನಮಾನ ಕೊಟ್ಟಿದ್ದೀರಿ?. ಮಂಗಳಮುಖಿಯರಿಗೆ ನಿಮ್ಮ ಪಕ್ಷದಲ್ಲಿ ನಿಗಮ ಮಂಡಳಿಯಲ್ಲಿ ಸ್ಥಾನ ಕೊಟ್ಟು ಘನತೆ ಹೆಚ್ಚಿಸಿಕೊಳ್ಳಿ. ಕ್ಷಮೆ ಕೇಳದೇ ಇದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.