ಮನೆ Blog ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿಲ್ಲದ ವರುಣನ ಆರ್ಭಟ ; ನಾಳೆಯೂ ಅಂಗನವಾಡಿ, ಶಾಲೆಗಳಿಗೆ ರಜೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿಲ್ಲದ ವರುಣನ ಆರ್ಭಟ ; ನಾಳೆಯೂ ಅಂಗನವಾಡಿ, ಶಾಲೆಗಳಿಗೆ ರಜೆ

0

ಮಂಗಳೂರು; ಕರಾವಳಿಯಲ್ಲಿ  ವರುಣನ ಆರ್ಭಟ ಜೋರಾಗಿದ್ದು ಇದುವರೆಗೂ 7 ಜನರನ್ನು ಮಳೆ ಬಲಿ ಪಡೆದಿದೆ. ಭಾರೀ ಮಳೆಯ ಹಿನ್ನೆಲೆ ಇಂದು ದಕ್ಷಿಣಕನ್ನಡ ಜಿಲ್ಲೆಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ಇಂದು ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ನೀಡಿದ್ದರು. ಆದರೆ ಹವಾಮಾನ ಇಲಾಖೆ ನಾಳೆಯೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರೋದರಿಂದ ನಾಳೆಯೂ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ನೀಡಿದ್ದಾರೆ.

ಮಳೆಯಿಂದಾಗಿ ಬಹುತೇಕ ನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.ಅಲ್ಲದೇ ಜನರಿಗೂ ನದಿ ಪಾತ್ರಗಳಿಗೆ ತೆರಳದಂತೆ ಎಚ್ಚರಿತೆ ನೀಡಲಾಗಿದೆ. ಮೀನುಗಾರಿಕೆಗೆ ತೆರಳದಂತೆಯೂ ಮುನ್ನಚ್ಚರಿ ನೀಡಲಾಗಿದೆ.

ಇಂದು ಒಂದೇ ದಿನ ಮಳೆಗೆ ದಕ್ಷಿಣಕನ್ನಡದಲ್ಲಿ ಮೂವರು ಬಲಿ; ಮೂವರೂ ವಿದ್ಯುತ್ ಆಘಾತದಿಂದಲೇ ಸಾವು

ವರುಣ ಆರ್ಭಟಕ್ಕೆ ಎರಡು ದಿನಗಳಲ್ಲಿ 7 ಮಂದಿ ಬಲಿಯಾಗಿದ್ದಾರೆ. ನಿನ್ನೆ ಉಳ್ಳಾಲದಲ್ಲಿ ಕಾಂಪೌಂಡ್ ಗೋಡೆ ಕುಸಿದು ಒಂದೇ ಕುಟುಂಬ ನಾಲ್ವರು ಸಾವನ್ನಪ್ಪಿದ್ದರು. ಅಪ್ಪ ಅಮ್ಮ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲಿ ಇಂದು ಮೂವರನ್ನು ವರುಣ ಬಲಿ ಪಡೆದಿದ್ದಾನೆ.

ಮಂಗಳೂರಿನಲ್ಲಿ ವಿದ್ಯುತ್ ಶಾಕ್ ನಿಂದ ಆಟೋ ಚಾಲಕರಿಬ್ಬರು ಸಾವು

ಇಂದು ಬೆಳ್ಳಂಬೆಳಗ್ಗೆ ಮಳೆಗೆ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಮಂಗಳೂರಿನ ರೊಸಾರಿಯೊ ಶಾಲೆಯ ಬಳಿ ಘಟನೆ ನಡೆದಿದೆ. ಪುತ್ತೂರಿನ ಉಪ್ಪಿನಂಗಡಿಯ ರಾಜು ಮತ್ತು ಹಾಸನದ ಸಕಲೇಶಪುರದ ದೇವರಾಜು  ಮೃತ ದುರ್ದೈವಿಗಳು.

ರೊಸಾರಿಯೊ ಶಾಲೆಯ ಹಿಂಭಾಗ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಟೋ ಚಾಲಕರೊಬ್ಬರು ಇಂದು ನಸುಕಿನ 4.30 ರ ಸುಮಾರಿಗೆ ತಮ್ಮ ಆಟೋವನ್ನು  ತೊಳೆಯುಲು ಮನೆಯಿಂದ ಹೊರಗೆ ಬಂದಿದ್ದಾರೆ. ಆಗ ಅರಿವಿಲ್ಲದೇ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ್ದಾರೆ.  ಇದನ್ನು ಗಮನಿಸಿದ ಇನ್ನೊಬ್ಬ ರಿಕ್ಷಾ ಚಾಲಕ ಗೋಣಿ ಚೀಲ ಹಿಡಿದು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೂ  ವಿದ್ಯುತ್ ಶಾಕ್ ಗೆ ತಗುಲಿ ಸಾವನ್ನಪ್ಪಿದ್ದಾರೆ.

ಬೆಳ್ತಂಗಡಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾವು

ಪಾರ್ಸೆಲ್ ಬಂದಿದೆ ಎಂದು ಅದನ್ನು ಪಡೆಯಲು ರಸ್ತೆ ಬಳಿ ಬಂದಿದ್ದ ಯುವತಿಯೊಬ್ಬಳು ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ಎಂಬಲ್ಲಿ ನಡೆದಿದೆ. ಇಲ್ಲಿನ ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿ ಪುತ್ರಿ ಪ್ರತೀಕ್ಷಾ ಶೆಟ್ಟಿ(20) ಸಾವನ್ನಪ್ಪಿದ ಯುವತಿ.

ಪ್ರತೀಕ್ಷಾ ಮನೆಯ ರಸ್ತೆಗೆ ಪಾರ್ಸೆಲ್ ಬಂದಿದ್ದರಿಂದ ಅದನ್ನು ತೆಗೆದುಕೊಳ್ಳಲು ರಸ್ತೆಗೆ ಬಳಿ ಬಂದಿದ್ದಾರೆ. ಈ ವೇಳೆ ಸ್ಟೇ ವಯರ್ ಗೆ ವಿದ್ಯುತ್  ಸ್ಪರ್ಶಿಸಿ ಅದು ನೀರಿನಲ್ಲಿ ಪ್ರವಹಿಸಿದೆ. ನೀರಿನಲ್ಲಿ ಕಾಲು ಇಡುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಪ್ರತೀಕ್ಷಾ ಸಾವನ್ನಪ್ಪಿದ್ದಾಳೆ. ಈ ವೇಳೆ ಆಕೆಯ ತಂದೆ ಆಕೆಯನ್ನು ರಕ್ಷಿಸಲು ಮುಂದಾಗಿದ್ದು ಅವರಿಗೂ ಶಾಕ್ ತಗುಲಿ ರಕ್ಷಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಮೃತ ಯುವತಿ ಕೊಕ್ಕಡ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಳು.ಯುವತಿಯ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತ ಯುವತಿ ತಂದೆ, ತಾಯಿ, ಸಹೋದರ ಹಾಗೂ ತಂಗಿಯನ್ನು ಅಗಲಿದ್ದಾರೆ.