ಮಂಗಳೂರು; ಸುಹಾಸ್ ಶೆಟ್ಟಿ ಹ.ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ 2022ರಲ್ಲಿ ಕೊಲೆಯಾದ ಫಾಝಿಲ್ ತಮ್ಮ ಆದಿಲ್ ಕೂಡ ಒಬ್ಬ.
ಮಂಗಳೂರಿನ ಬಜ್ಪೆ ಕಿನ್ನಿಪದವು ನಿವಾಸಿ, ವೃತ್ತಿಯಲ್ಲಿ ಡ್ರೈವರ್ ಆಗಿರುವ ಅಬ್ದುಲ್ ಸಫ್ವಾನ್ ( 29), ಬಜ್ಪೆ ಶಾಂತಿಗುಡ್ಡ ಬಳಿಯ ನಿವಾಸಿ ವೃತ್ತಿಯಲ್ಲಿ ಮೇಸ್ತ್ರೀಯ ಹೆಲ್ಪರ್ ಆಗಿರುವ ನಿಯಾಜ್ (28), ಬಜ್ಪೆ ಕೆಂಜಾರಿನ ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮುಝಮಿಲ್ (32) , ಕಳವಾರು ನಿವಾಸಿ ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿರುವ ಕಲಂದರ್ ಶಾಫಿ (31), ಚಿಕ್ಕಮಗಳೂರಿನ ಕಳಸ ತಾಲೂಕಿನ ರುದ್ರಪಾದ ನಿವಾಸಿ, ಡ್ರೈವರ್ ರಂಜಿತ್ (19), ಕಳಸದ ಮಾವಿನಕೆರೆ ಗ್ರಾಮದ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ (20), 2022 ರಲ್ಲಿ ಕೊಲೆಯಾದ ಸುರತ್ಕಲ್ ನ ಫಾಝಿಲ್ ಸಹೋದರ ಆದಿಲ್ ಮೆಹರೂಫ್ ಬಂಧಿತರು.
ಪ್ರಕರಣದ ಪ್ರಮುಖ ಆರೋಪಿ ಸಫ್ವಾನ್ ಜೊತೆ ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ ಗಲಾಟೆ ಮಾಡಿಕೊಂಡಿದ್ದ. 2023ರ ಸಪ್ಟೆಂಬರ್ 3ರಂದು ಕಳವಾರು ಬಳಿ ಸಫ್ವಾನ್ ಗೆ ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ ಚೂರಿ ಇರಿದಿದ್ದ. ಗಲಾಟೆ ವಿಚಾರದಲ್ಲಿ ಮಾತುಕತೆಗೆ ಕರೆದು ಪ್ರಶಾಂತ್ ಮತ್ತು ಇತರರು ಡ್ರ್ಯಾಗರ್ ನಿಂದ ಇರಿದಿದ್ದರು. ಇರಿತದಿಂದ ಗಂಭೀರ ಗಾಯಗೊಂಡು ಸಫ್ವಾನ್ ಆಸ್ಪತ್ರೆಗೆ ದಾಖಲಾಗಿದ್ದ. ಆ ಬಳಿಕ ಹಲವು ಬಾರಿ ಪ್ರಶಾಂತ್ ಮೇಲೆ ದಾಳಿಗೆ ಸಫ್ವಾನ್ ಪ್ಲಾನ್ ಮಾಡಿದ್ದ. ಈ ವೇಳೆ ಪ್ರಶಾಂತ್ ಬೆಂಬಲಕ್ಕೆ ಸುಹಾಸ್ ಶೆಟ್ಟಿ ನಿಂತಿದ್ದ. ಇದೇ ವಿಚಾರದಲ್ಲಿ ಸುಹಾಸ್ ಹಾಗೂ ಸಫ್ವಾನ್ ಮಧ್ಯೆ ಸಂಘರ್ಷ ಉಂಟಾಗಿತ್ತು ಎನ್ನಲಾಗಿದೆ.
ಹೀಗಾಗಿ ಪ್ರಶಾಂತ್ ಬದಲು ಸುಹಾಸ್ ಶೆಟ್ಟಿ ಕೊಲ್ಲಲು ಸಫ್ವಾನ್ ಪ್ಲಾನ್ ಹಾಕಿದ್ದ. ಕೊನೆಗೂ ಅದರಂತೆ 0 ಜನ ತಂಡ ಮಾಡಿಕೊಂಡು ಸುಹಾಸ್ ಶೆಟ್ಟಿ ಹತ್ಯೆ ಪ್ರಿ ಪ್ಲ್ಯಾನ್ ಮಾಡಿದ್ದ. ಅದರಂತೆ 2022ರಲ್ಲಿ ಕೊಲೆಯಾಗಿದ್ದ ಸುರತ್ಕಲ್ ಫಾಝಿಲ್ ನ ತಮ್ಮ ಆದಿಲ್ ಅನ್ನು ಸಂಪರ್ಕಿಸಿದ್ದ. ಸುಹಾಸ್ ಮೇಲೆ ಮೊದಲೇ ಅಣ್ಣನನ್ನು ಕೊಂದ ಸಿಟ್ಟಿದ್ದರಿಂದ ಆದಿಲ್ ಸುಹಾಸ್ ಹತ್ಯೆಗೆ ಆದಿಲ್ 5 ಲಕ್ಷ ರೂ. ಕೊಡುವ ಭರವಸೆ ನೀಡಿದ್ದ. ಅಲ್ಲದೇ 3 ಲಕ್ಷ ರೂ. ಮುಂಗಡವಾಗಿ ಸಫ್ವಾನ್ ಗೆ ಪಾವತಿಸಿದ್ದ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದಾರೆ.
ಇನ್ನು ಪ್ರಕರಣ ಇನ್ನೋರ್ವ ಆರೋಪಿ ನಿಯಾಝ್ ಎಂಬಾತ ತನ್ನ ಸ್ನೇಹಿತರಾದ ನಾಗರಾಜ್ ಮತ್ತು ರಂಜಿತ್ ಎಂಬವರನ್ನು ಹತ್ಯೆಯ ತಂಡಕ್ಕೆ ಸೇರಿಸಿಕೊಂಡಿದ್ದಾನೆ. ಇವರಿಬ್ಬರು ಎರಡು ದಿನಗಳಿಂದ ಸಫ್ವಾನ್ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಅಲ್ಲದೇ ಮೇ 1ರಂದು ಸುಹಾಸ್ ಚಲನವಲನದ ಮೇಲೆ ಸಂಪೂರ್ಣವಾಗಿ ನಿಗಾ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಸುಹಾಸ್ ಶೆಟ್ಟಿ ಮೇ 1 ರಂದು ಕಿನ್ನಿಪದವಿಗೆ ಬರುತ್ತಿದ್ದಂತೆ ದಾಳಿ ನಡೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದಾರೆ.