ಬೆಂಗಳೂರು; ಕಾಂಗ್ರೆಸ್ ನಿಂದ ಕಳೆದೆರಡು ವರ್ಷಗಳಿಂದ ತುಷ್ಟೀಕರಣ ರಾಜಕಾರಣವಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೈಸೂರಿನ ಉದಯಗಿರಿಯಲ್ಲಿ ಕೆಲವು ದೇಶದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ. ಇವತ್ತು ಜಾಗೃತಿ ಜಾಥಾಗೆ ಕರೆ ಕೊಡಲಾಗಿದೆ. ಕಾಂಗ್ರೆಸ್ ನಿಂದ ಕಳೆದೆರಡು ವರ್ಷಗಳಿಂದ ತುಷ್ಟೀಕರಣ ರಾಜಕಾರಣ ಆಗುತ್ತಿದೆ. ಇದನ್ನು ನೋಡಿದರೆ ನಿಜಾಮರ ಆಡಳಿತ ನೆನಪಾಗುತ್ತದೆ. ರಜಾಕಾರರ ಆಡಳಿತ ಏನೋ ಎಂಬ ಹಾಗೆ ಹಿಂದೂಗಳಿಗೆ ಭಾಸವಾಗುತ್ತಿದೆ. ಪೊಲೀಸರಿಗೂ ಸ್ವಾತಂತ್ರ್ಯ ಕೊಟ್ಟಿಲ್ಲ. ಖುದ್ದು ಪೊಲೀಸ್ ಇಲಾಖೆ ಅಸಹಾಯಕವಾಗಿದೆ. ಗೃಹ ಸಚಿವರೇ ತಮ್ಮ ರಾಜೀನಾಮೆ ಮಾತಾಡುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾವು ಇವತ್ತು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸುತ್ತೇವೆ ಎಂದಿದ್ದಾರೆ.
ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸರ್ಕಾರಕ್ಕೆ ತಾಕತ್, ಯೋಗ್ಯತೆ ಇದ್ದಿದ್ದರೆ ಆವತ್ತು ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು. ಇವತ್ತು ಹಿಂದೂ ಕಾರ್ಯಕರ್ತರು ಹೋರಾಟ ಮಾಡುತ್ತೇವೆ ಅಂದರೆ ನಿಷೇಧಾಜ್ಞೆ ಹೇರುವುದು ಅಲ್ಲ. ಯಾಕೆ ಆವತ್ತು ಸರ್ಕಾರ, ಗೃಹ ಇಲಾಖೆ ಸತ್ತು ಹೋಗಿತ್ತಾ?. ಏನೇ ಆದರೂ ನಾವು ಹೋರಾಟ ಮಾಡುತ್ತೇವೆ. ನಮ್ಮ ಹೋರಾಟ ತಡೆಯಲು ಏನೇ ನಿಷೇಧಾಜ್ಞೆ ಹಾಕಿದರೂ ಆಗಲ್ಲ. ಇವತ್ತು ಎಲ್ಲಾ ಹಿಂದೂಪರ ಸಂಘಟನೆಗಳು ಭಾಗವಹಿಸುತ್ತಿದ್ದಾರೆ. ರಜಾಕಾರರ ಅಟ್ಟಹಾಸದ ಆಡಳಿತ ರಾಜ್ಯದಲ್ಲಿ ಮರುಕಳಿಸುತ್ತಿದೆ ಅನ್ನಿಸುತ್ತಿದೆ. ಪೊಲೀಸ್ ಠಾಣೆಗೇ ಕಲ್ಲೆಸೆಯುವ, ಪೊಲೀಸರನ್ನೇ ಎದುರಿಸುವ ಮಟ್ಟಕ್ಕೆ ಹೋಗಿದ್ದಾರೆ ಆಂದ್ರೆ ಪೊಲೀಸ್ ಇಲಾಖೆ, ಸರ್ಕಾರ ಅಸಹಾಯಕವಾಗಿದೆ. ಅನಿವಾರ್ಯವಾಗಿ ಹಿಂದೂಗಳ ರಕ್ಷಣೆಗೆ ನಾವು ನಿಲ್ಲಬೇಕಿದೆ ಎಂದಿದ್ದಾರೆ.
ಎಸ್ಕಾಂಗಳಿಂದ ಜನರಿಂದಲೇ ಗೃಹ ಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೊಡುವಂತೆ ಕೋರಿ ಪ್ರಸ್ತಾಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕಿದೆ. ರಾಜ್ಯ ಸುಭಿಕ್ಷವಾಗಿದೆ, ಜನ ನೆಮ್ಮದಿಯಿಂದ ಇದ್ದಾರೆ ಅಂತ ಸಿಎಂ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಆಲ್ ಈಸ್ ವೆಲ್ ಭಾವನೆಯಿಂದ ಹೊರಗೆ ಬರಬೇಕು. ಸಾರಿಗೆ ಸಂಸ್ಥೆಗಳಿಗೆ 7 ಸಾವಿರ ಕೋಟಿ ಬಾಕಿ ಕೊಡಬೇಕಿದೆ, ವೇತನ ಕೊಡುತ್ತಿಲ್ಲ. ಸರ್ಕಾರಿ ಇಲಾಖೆ, ಕಚೇರಿಗಳು 6 ಸಾವಿರ ಕೋಟಿ ಬಾಕಿ ವಿದ್ಯುತ್ ಬಿಲ್ ಕಟ್ಟಬೇಕಿದೆ. ಇವರ ಯೋಜನೆಗಳನ್ನು ನೋಡುತ್ತಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸುವ ಲಕ್ಷಣ ಕಾಣುತ್ತಿದೆ.ಇದನ್ನೆಲ್ಲಾ ನಾವು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದರು. ಬಳಿಕ ಮೈಸೂರಿನಲ್ಲಿ ಜನಾಂದೋಲನ ರ್ಯಾಲಿಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೆರಳಿದ್ರು.