ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನದ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಯಾವುದರ ಬಗ್ಗೆಯೂ ಕಮೆಂಟ್ ಮಾಡಲ್ಲ. ಈಗಾಗಲೇ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ, ವಿಚಾರ ಕೋರ್ಟ್ ನಲ್ಲಿದೆ. ರಾಜಕೀಯ ದ್ವೇಷವನ್ನು ಮಾಡಲು ಹೋಗಬೇಡಿ.ಅಷ್ಟೇ ರಾಜ್ಯ ಸರ್ಕಾರಕ್ಕೆ ನನ್ನ ಪ್ರಾರ್ಥನೆ. ಯಾರಿಂದ ಏನು ತಪ್ಪಾಗಿದೆ ಅಂತಾ ನನಗೆ ಪೂರ್ಣ ಮಾಹಿತಿ ಇಲ್ಲ. ರಾಜಕೀಯದ ಕಾರಣಕ್ಕಾಗಿ ದ್ವೇಷ ಮಾಡಲು ಹೋಗಬೇಡಿ ಅಷ್ಟೇ ಎಂದಿದ್ದಾರೆ.
ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ಸರ್ಕಾರ ರೂಲ್ಸ್ ಮಾಡಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ್
ಬೆಂಗಳೂರು; ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ರಾಜ್ಯ ಸರ್ಕಾರ ರೂಲ್ಸ್ ಮಾಡಿದೆ. ಹಾಗಾಗಿ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೆಸರನ್ನು ಕೆ ಆರ್ ರಸ್ತೆ ಇಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕರ್ನಾಟಕಕ್ಕೆ ಕೃಷ್ಣ ರಾಜ ಸಾಗರ ಅಣೆಕಟ್ಟನ್ನು ನೀಡಿದಂತಹ ಅಂತಹ ಆ ಮನೆತನದವರ ಹೆಸರನ್ನು ತೆಗೆದು ಸಿದ್ದರಾಮಯ್ಯ ಅವರ ಹೆಸರು ಇಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗೇನಾದ್ರು ಹೆಸರು ಇಡಬೇಕು ಅಂತಾ ಇದರೆ ಹೊಸ ರಸ್ತೆಯೊಂದನ್ನು ಮಾಡಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನು ಇಡಲಿ. ನನ್ನ ಅಭ್ಯಂತರವಿಲ್ಲ. ಆದರೆ ಈ ನಾಡಿಗೆ ಸೇವೆ ಸಲ್ಲಿಸಿದವರು, ನಾಡಿಗೆ ಅನ್ನ ಕೊಟ್ಟವರು, ನೀರು ಕೊಟ್ಟಂತಹ ಮಹಾರಾಜರ ಮನೆತನ. ಅಂತಹವರ ಮೇಲೆ ಮಾರಿ ಕಣ್ಣು ಹೋರಿ ಮೇಲೆ ಅನ್ನೋ ಹಾಗೇ ಯಾಕೆ. ಸಿಎಂ ಸಿದ್ದರಾಮಯ್ಯ ಅವರು ಎರಡು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಇಂತಹವರು ಇಂತಹ ಕೆಲಸಕ್ಕೆ ಕೈ ಹಾಕ್ತಾರೆ ಅಂದರೆ ಜನ ಅವರ ಬಗ್ಗೆ ಇರುವ ಭಾವನೆಯನ್ನು ಬದಲಾಯಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮೈತ್ರಿ ಪಕ್ಷದವರು ಸಿ ಟಿ ರವಿ ವಿಚಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಜೊತೆ ಬರುತ್ತಿಲ್ಲವಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ನಿಮ್ಮ ಜೊತೆ ಮಾತನಾಡದೇ ಇರಬಹುದು ಆದರೆ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಘಟನೆ ಆದ ಕೂಡಲೇ ನನಗೆ ಕರೆ ಮಾಡಿ ಬ್ರದರ್ ಏನು ಮಾಡೋಣ ಪ್ರೆಸ್ ಮೀಟ್ ಮಾಡೋಣ ಎಂದು ಹೇಳಿದರು.ಅದರಂತೆ ಸುದ್ದಿಗೋಷ್ಟಿ ಮಾಡಿ ಹೇಳಿದ್ದಾರೆ. ಇನ್ನೇನು ಬೇಕು. ನಮ್ಮ ಜೊತೆ ಕೇಂದ್ರ ಸಚಿವ ಕುಮಾರಸ್ವಾಮಿ ನಿರಂತರ ಸಂಪರ್ಕದಲ್ಲಿದ್ದಾರೆ. ಫೋನ್ ಕಾಲ್ ಬೇಕಾದರೆ ತೋರಿಸುತ್ತೇನೆ ಎಂದು ತಿಳಿಸಿದರು.
ಅನುದಾನ ಕೊರತೆ ಬಗ್ಗೆ ಬಸವರಾಜ್ ರಾಯರೆಡ್ಡಿ ಹೇಳಿಕೆ ಬಗ್ಗೆ ಮಾತನಾಡಿದ ಆರ್ ಅಶೋಕ್ ಅವರು ರಾಜ್ಯ ಸರ್ಕಾರ ಆರ್ಥಿಕವಾಗಿ ನಷ್ಟದಲ್ಲಿದೆ. ಬಸವರಾಜ್ ರಾಯರೆಡ್ಡಿ ಅವರು ಹಲವು ಬಾರಿ ಹೇಳಿದರೂ ಸಿಎಂ ಸಿದ್ದರಾಮಯ್ಯ ಅವರು ಕೇಳಿಲ್ಲ. ಶಕ್ತಿ ಯೋಜನೆ ಮೂಲಕ ಹೆಣ್ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ನಷ್ಟ ಉಂಟಾಗಿದೆ. ಸಾರಿಗೆ ಇಲಾಖೆಯವರು ಧರಣಿ ಮಾಡುತ್ತಿದ್ದಾರೆ. ಅವರಿಗೆ ನಾಲ್ಕು ಸಾವಿರ ಕೋಟಿ ನೀಡಬೇಕು. ರೈತರಿಗೆ ಒಂದೂವರೆ ಸಾವಿರ ಕೋಟಿ ಸಬ್ಸಿಡಿ ನಾಮ ಹಾಕಿದ್ದಾರೆ ಎಂದರು. ನಾಮ ಹಾಕೋದರಲ್ಲಿ ಕಾಂಗ್ರೆಸ್ ನವರು ಪಳಗಿದವರು.ಹಾಗಾಗಿ ಈ ವರ್ಷ ಒಂದೂವರೆ ಲಕ್ಷ ಕೋಟಿ ಸಾಲ ಮಾಡ್ತಿದ್ದಾರೆ. ಮುಂದಿನ ವರ್ಷ ಸಿದ್ದರಾಮಯ್ಯ ಮನಸ್ಸು ಮಾಡಿ 2 ಲಕ್ಷ ಕೋಟಿ ಸಾಲ ಮಾಡಿದರೆ ಕರ್ನಾಟಕ ಜನ್ಮದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಖಾನಾಪುರ ಸಿಪಿಐ ಮಂಜುನಾಥ್ ನಾಯಕ್ ಅಮಾನತು ವಿಚಾರದ ಬಗ್ಗೆ ಮಾತನಾಡಿದ ಅವರು ಸರ್ಕಾರ ಒಂದು ರೀತಿಯ ಹುಚ್ಚರ ಸಂತೆಯಾಗಿದ್ರೆ, ಪೊಲೀಸ್ ಠಾಣೆಗಳು ಬುದ್ಧಿಯಿಲ್ಲದ ಇಲಾಖೆಯಾಗಿ ವರ್ತಿಸುತ್ತಿದೆ. ಸಿ ಟಿ ರವಿ ಮೇಲೆ ಸುಮಾರು ನಲುವತ್ತು- ಐವತ್ತು ಜನ ಹಲ್ಲೆ ಮಾಡಿದರು. ಅವರನ್ನು ಕೊಲೆ ಮಾಡುವ ಪ್ರಯತ್ನ ಮಾಡಿದರು. ಅದಕ್ಕೆ ಸಂಬಂಧಪಟ್ಟಂತೆ ಇದರಲ್ಲಿ ಮಂತ್ರಿಗಳ ಪಾತ್ರ ಇದೆ ಮತ್ತು ಅವರ ಪಿಎ ಯಾರ ಪಾತ್ರ ಇದೆ ಈ ಪ್ರಕರಣದಲ್ಲಿ ಅವರ ಹೆಸರು ಉಲ್ಲೇಖಿಸಿ ಹದಿನೈದು ನಿಮಿಷ ದೂರು ಬರೆದು ಅದನ್ನು ಅದೇ ಠಾಣೆಯಲ್ಲಿ ಎಫ್ ಐ ಆರ್ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಅವರು ಮೊದಲು ದೂರು ತೆಗೆದುಕೊಳ್ಳಲು ನಿರಾಕರಿಸಿದರು. ಆಗ ನಾವು ನೀವು ಅವರ ದೂರು ಹೇಗೆ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದೆವು. ವಿಧಾನಸಭೆ ವಿಪಕ್ಷ ನಾಯಕರು ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕರನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ಕಾಯಿಸಿ ಅವರು ನಮ್ಮ ದೂರು ತೆಗೆದುಕೊಂಡರು. ಕೇವಲ ಅರ್ಧ ಗಂಟೆ ಅಷ್ಟೇ ನಾವು ಪೊಲೀಸ್ ಠಾಣೆಯ ಒಳಗೆ ಇದ್ದೆವು. ಉಳಿದ ನಾಲ್ಕೂವರೆ ಗಂಟೆ ಪೊಲೀಸ್ ಠಾಣೆಯ ಆಚೆಯೇ ಇದ್ದೆವು. ಮಂತ್ರಿಗಳು ಹೇಳಿದ್ದಾರೆ ನಾವು ಬಿಡಲ್ಲ ಎಂದು ಹೊರಗಡೆ ಕೂರಿಸಿದ್ದಾರೆ. ನಾವು ಧಿಕ್ಕಾರ ಕೂಗಲು ಆರಂಭಿಸಿದ ಬಳಿಕ ನಮ್ಮ ದೂರು ಸ್ವೀಕರಿಸಿದರು. ಪೊಲೀಸ್ ಠಾಣೆ ಕಾಂಗ್ರೆಸ್ ನವರ ಅಪ್ಪಂದಾ? ಸಿಸಿಟಿವಿಯಲ್ಲಿ ಎಲ್ಲಾ ದಾಖಲೆ ಇದೆ ನೋಡಿಕೊಳ್ಳಲಿ. ಸರ್ಕಾರಕ್ಕೆ ಬುದ್ಧಿ ಭ್ರಮಣೆಯಾಗಿದೆ. ಪೊಲೀಸ್ ಠಾಣೆಗಳು ಸುರಕ್ಷಿತ ಅಲ್ಲ. ಯಾರಾದರೂ ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ರೂಲ್ಸ್ ಮಾಡಿದ್ದಾರೆ. ಗೃಹಸಚಿವರನ್ನು ಏನೂ ಕೇಳಿದರೂ ನನಗೆ ಗೊತ್ತಿಲ್ಲ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ.ಸರ್ಕಾರ ಮಾನ ಮರ್ಯಾದೆ ಇಲ್ಲ ಎಂದರು.