ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ರೇಣುಕಾಸ್ವಾಮಿ ಕೊಲೆ ಆರೋಪದ ಅಡಿಯಲ್ಲಿ ಕನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಈಗ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ. ಹತ್ಯೆಗೊಳಗಾಗಿರುವ ರೇಣುಕಾಸ್ವಾಮಿ ಮೂಲತಃ
ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದನು ಎಂದು ತಿಳಿದುಬಂದಿದೆ.
ಅಪೊಲೋ ಮೆಡಿಕಲ್ ಶಾಪ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ, ಶಿವನಗೌಡ ಮತ್ತು ರತ್ನಪ್ರಭಾ ದಂಪತಿಯ ಪುತ್ರನಾಗಿದ್ದು ತಂದೆ ಶಿವನಗೌಡ ಬೆಸ್ಕಾಂ ನಿವೃತ್ತ ನೌಕರ ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ 8 ರಂದು ಶನಿವಾರ ತನ್ನ ಮನೆಯಿಂದ ಹೊರಟಿದ್ದ ರೇಣುಕಾಸ್ವಾಮಿ ಮನೆಗೆ ವಾಪಸ್ ಬಂದಿರಲಿಲ್ಲ. ಶನಿವಾರ ಮಧ್ಯಾಹ್ನ ತಾಯಿ ಕರೆ ಮಾಡಿದ್ದಾಗ ಗೆಳೆಯರ ಜೊತೆ ಭೋಜನಕ್ಕೆ ಹೋಗುವುದಾಗಿ ಹೇಳಿದ್ದನು ಎನ್ನಲಾಗಿದೆ. ನಿನ್ನೆ ಬೆಂಗಳೂರು ಪೊಲೀಸರಿಂದ ರೇಣುಕಾಸ್ವಾಮಿ ಶವವಾಗಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಲ್ಪಟ್ಟ ಬಳಿಕವೇ ಮನೆಯವರಿಗೆ ಕೊಲೆ ವಿಚಾರ ತಿಳಿದಿದೆ.
ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಮೂರು ತಿಂಗಳ ಗರ್ಭಿಣಿಯಾಗಿದ್ದು, ಜೂನ್ 28ಕ್ಕೆ ರೇಣುಕಾಸ್ವಾಮಿ ಮದುವೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿತ್ತು ಎಂಬ ಮಾಹಿತಿಯೂ ತಿಳಿದುಬಂದಿದೆ.
ಈ ಹಿಂದೆ ಚಿತ್ರದುರ್ಗದ ಬಜರಂಗದಳದ ಸಂಘಟನೆಯಲ್ಲಿಯೂ ರೇಣುಕಾಸ್ವಾಮಿ ಕಾರ್ಯನಿರ್ವಹಿಸಿದ್ದು, ಮೂರು ವರ್ಷಗಳ ಹಿಂದೆ ಸಂಘಟನೆಯ ಸುರಕ್ಷಾ ಪ್ರಮುಖ್ ಆಗಿದ್ದನು ಎನ್ನಲಾಗಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೋರಿಯಲ್ಲಿ ನಾಯಿಗಳು ಎಳೆದಾಡುತ್ತಿದ್ದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಮೈ ಮೇಲಿನ ಗಾಯಗಳನ್ನು ಗುರುತಿಸಿ ಪೊಲೀಸರು ತನಿಖೆ ಮುಂದುವರಿಸಿದಾಗ ರೇಣುಕಾಸ್ವಾಮಿ ಕೊಲೆ ವಿಚಾರ ಬೆಳಕಿಗೆ ಬಂದಿದೆ