ಬೆಂಗಳೂರು; ಮೈಸೂರಿನಲ್ಲಿ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಡಾ ಅಧಿಕಾರಿಗಳಿಗೆ ಇಡಿಯವರು ಮೂರು ಬಾರಿ ಫೈಲ್ ಗಳನ್ನು ಕೇಳಿದ್ದರೂ ಕೊಟ್ಟಿರಲಿಲ್ಲ.ಸರ್ಕಾರಕ್ಕೆ ಇದರಲ್ಲಿ ಸತ್ಯ ಹೊರಗೆ ಬರುವುದು ಇಷ್ಟ ಇಲ್ಲ.ಹಾಗಾಗಿ ಫೈಲ್ ಗಳನ್ನು ಕೊಟ್ಟಿರಲಿಲ್ಲ.ಈಗಾಗಲೇ ಅಲ್ಲಿನ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ, ಸೈಟು ವಾಪಸ್ ಮಾಡಲಾಗಿದೆ.ಈ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಸಂಚು ಮಾಡಿದೆ.ಇತ್ತ ಲೋಕಾಯುಕ್ತ ತನಿಖೆ ಆರಂಭವಾದರೂ ಅವರ ತನಿಖೆ ಮೇಲೆ ನಮಗೆ ಅನುಮಾನ ಇದೆ.ಲೋಕಾಯುಕ್ತದವರು ಯಾರನ್ನೂ ಕರೆದು ವಿಚಾರಣೆ ಮಾಡಿಯೇ ಇಲ್ಲ.ಈ ಪ್ರಕರಣ ಸಿಬಿಐಗೆ ಕೊಡಲಿ.ಮುಡಾ ಪ್ರಕರಣ ಮುಚ್ಚಿ ಹಾಕುವಲ್ಲಿ ಲೋಕಾಯುಕ್ತ ಪೊಲೀಸರೂ ಶಾಮೀಲಾಗಿದ್ದಾರೆ.ಇಡಿ ದಾಳಿಯಾಗಿದೆ, ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು.ಇಡಿ ತನಿಖೆಗೆ ಬೈರತಿ ಸುರೇಶ್ ತಂದ ಫೈಲುಗಳನ್ನು ಒಪ್ಪಿಸಬೇಕು.ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ರಾಜೀನಾಮೆ ಕೊಡಬೇಕು.ಇಲ್ಲದೇ ಹೋದರೆ ಇಡಿಯವರು ಸಿಎಂ ಅವರನ್ನು ಬಂಧಿಸಬೇಕು ಎಂದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಕೃಷ್ಣ ಕೊಟ್ಟಿರುವ ದೂರಿನ ಆಧಾರದಲ್ಲಿ ಇಡಿ ದಾಳಿ ನಡೆದಿದೆ. ಸ್ನೇಹಮಯಿ.ಸಿದ್ದರಾಮಯ್ಯ ಸೈಟುಗಳಷ್ಟೇ ಅಲ್ಲ, 3-4 ಸಾವಿರ ಸೈಟುಗಳ ಅಕ್ರಮ ಆಗಿದೆ ಅಂತ ಮರಿಗೌಡ ಅವರೇ ತನಿಖೆಗೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.ಇದರ ನಂತರ ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದರು.ಖುದ್ದು ಕಾಂಗ್ರೆಸ್ ನವರೇ ಅಕ್ರಮದ ಬಗ್ಗೆ ಹೇಳಿದ್ದಾರೆ.ಹೀಗಾಗಿ ಈ ಇಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ.ಇದನ್ನು ರಾಜಕೀಯವಾಗಿ ನೋಡುವುದು ಬೇಡ.ದಾಳಿ ಹಿಂದೆ ಕೇಂದ್ರ ಸರ್ಕಾರವೂ ಇಲ್ಲ, ಬಿಜೆಪಿಯೂ ಇಲ್ಲ.3-4 ಸಾವಿರ ಕೋಟಿ ರೂ. ಅಕ್ರಮ ಮುಡಾದಲ್ಲಿ ಆಗಿದೆ.ಇಷ್ಟು ಹಣ ಸರ್ಕಾರದ ಖಜಾನೆಗೆ ಬಂದರೆ ಒಳ್ಳೆಯದೇ ಅಲ್ವಾ?ನಾವೇನೂ ಇಡಿಗೆ ದೂರು ಕೊಟ್ಟಿಲ್ಲ. ಬಿಜೆಪಿಯವರು ಯಾರೂ ದೂರು ಕೊಟ್ಟಿಲ್ಲ ಎಂದರು.
ಇದೇ ವಿಚಾರಕ್ಕ ಸಂಬಂಧಪಟ್ಟಂತೆ ಮಾತನಾಡಿದ ಮಾಜಿ ಸಂಸದ ಎಸ್. ಮುನಿಸ್ವಾಮಿ ಕಾಂಗ್ರೆಸ್‌ನವರಿಗೆ ಈ ದಾಳಿ ರಾಜಕೀಯ ಪ್ರೇರಿತ ಅಂತ ಹೇಳುವುದು ಬಿಟ್ಟು ಬೇರೇನೂ ಉಳಿದಿಲ್ಲ.ಸಿದ್ದರಾಮಯ್ಯ ತಪ್ಪು ಮಾಡಿದ್ದಕ್ಕೇ ಸೈಟುಗಳನ್ನು ವಾಪಸ್ ಮಾಡಿದ್ದಾರೆ.ಸಿದ್ದರಾಮಯ್ಯ ಕಾನೂನು ಪಂಡಿತರು, ವಕೀಲರು.ಅರಸು ಅವರ ಮೇಲೆ, ಸಂವಿಧಾನದ ಮೇಲೆ, ಅಂಬೇಡ್ಕರ್ ಮೇಲೆ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತು ಗೌರವ ಇದ್ದರೆ ಕೂಡಲೇ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ ಸಿದ್ದರಾಮಯ್ಯ ನೂರಕ್ಕೆ ನೂರು ತಪ್ಪು ಮಾಡಿದ್ದಾರೆ.ಈಗಾಗಲೇ ಸೈಟ್ ವಾಪಸ್ ಆಗಿದೆ, ಮರಿಗೌಡ ರಾಜೀನಾಮೆ ಕೊಟ್ಟಿದ್ದಾರೆ.ಇವರು ರಾಜೀನಾಮೆ ಕೊಡದೇ ಚಾಮುಂಡೇಶ್ವರಿ ಆಶೀರ್ವಾದ ಇದೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ.ಸಿದ್ದರಾಮಯ್ಯ ತಪ್ಪು ಮಾಡಿ ಸಿಕ್ಕಿಕೊಂಡಿರುವುದು ಜಗಜ್ಜಾಹೀರಾಗಿದೆ.ಸಿದ್ದರಾಮಯ್ಯ ಜಾಗದಲ್ಲಿ ಯಾರಾದರೂ ಬಿಜೆಪಿ ನಾಯಕರು ಇರುತ್ತಿದ್ದರೆ ಸಿದ್ದರಾಮಯ್ಯ ಯಾವ ರೀತಿ ದಾಳಿ ಮಾಡುತ್ತಿದ್ದರು ಎನ್ನುವುದು ಕಲ್ಪನೆಗೂ ದೂರ.ನೈತಿಕತೆ ಆಧಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು.ಸಿದ್ದರಾಮಯ್ಯ ಮೇಲೆ ಎರಡು ನ್ಯಾಯಾಲಯಗಳು ಆದೇಶ ಮಾಡಿವೆ.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ವೇಳೆ ಇಡಿ ಬಗ್ಗೆ, ರಾಜ್ಯಪಾಲರ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದರು ನೆನಪಿಸಿಕೊಳ್ಳಲಿ.ಈಗ ಇಡಿ ದಾಳಿ ರಾಜಕೀಯ ಪ್ರೇರಿತ ಅಂದಿದ್ದಾರೆ.ಹಾಗಾದ್ರೆ ಕೋರ್ಟ್ ಆದೇಶಗಳು ರಾಜಕೀಯ ಪ್ರೇರಿತವಾ? ಎಫ್ಐಆರ್, ಇಸಿಐಆರ್ ದಾಖಲಾಗಿರೋದು ರಾಜಕೀಯ ಪ್ರೇರಿತನಾ? ಎಂದು ಪ್ರಶ್ನಿಸಿದ್ರು.