ಮನೆ Latest News ಶಿಗ್ಗಾಂವ್ ಉಪಚುನಾವಣೆ ಘೋಷಣೆ ಹಿನ್ನೆಲೆ; ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿದ ಸಂಸದ ಬಸವರಾಜ...

ಶಿಗ್ಗಾಂವ್ ಉಪಚುನಾವಣೆ ಘೋಷಣೆ ಹಿನ್ನೆಲೆ; ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿದ ಸಂಸದ ಬಸವರಾಜ ಬೊಮ್ಮಾಯಿ‌

0

ಬೆಂಗಳೂರು; ಶಿಗ್ಗಾಂವ್ ಉಪಚುನಾವಣೆ ಘೋಷಣೆ ಹಿನ್ನೆಲೆ ಇಂದು ಸಂಸದ ಬಸವರಾಜ ಬೊಮ್ಮಾಯಿ‌ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ್ರು. ಈ ವೇಳೆ  ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಡಿಯೂರಪ್ಪ ಜೊತೆ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಿದರು.

ಬಸವರಾಜ್ ಬೊಮ್ಮಾಯಿ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ವರಿಷ್ಠರ ಜೊತೆ ಚರ್ಚೆಗೆ ಮುಂದಾಗಿದ್ದಾರೆ. ಹೀಗಾಗಿ ವರಿಷ್ಠರ ಜೊತೆ ಚರ್ಚಿಸುವ ಮುನ್ನ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸದಲ್ಲಿ ಬಸವರಾಜ್ ಬೊಮ್ಮಾಯಿ ಬಿಎಸ್ವೈ ಅವರನ್ನು ಭೇಟಿಯಾಗಿದ್ದಾರೆ.

ಇನ್ನು ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ನಮ್ಮ ಹಿರಿಯ ನಾಯಕರು, ಸಹಜ ಭೇಟಿ ಮಾಡಿದ್ದೇನೆ. ಉಪಚುನಾವಣೆ ಬಗ್ಗೆ ಬಂದು ಮಾತಾಡು ಅಂದಿದ್ದರು, ಹಾಗಾಗಿ ಬಂದು ಮಾತಾಡಿದ್ದೇನೆ. ಶಿಗ್ಗಾಂವ್ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಯಿತು. ಏನೇನು ತಯಾರಿ ಮಾಡಿದ್ದೇವೆ ಆಂತ ಕೇಳಿದರು, ಹೇಳಿದ್ದೇನೆ. ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ಆಗಿದೆ. ಅಂತಿಮವಾಗಿ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು ಅಂತ ಆಗಿದೆ.ದೆಹಲಿಗೆ ಅಕ್ಟೋಬರ್ 19 ರ ನಂತರ ಹೋಗುತ್ತೇನೆ.ಎಲ್ಲಾ ಮೂರು ಕ್ಷೇತ್ರಗಳಲ್ಲೂ ಗೆಲ್ಲಲು ಪ್ರಯತ್ನ ಮಾಡೋಣ ಅಂದಿದ್ದಾರೆ.ಇವತ್ತು ನಾವು ಶಿಗ್ಗಾಂವ್ ಕ್ಷೇತ್ರದ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ.ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಹಾಗೂ ನಮ್ಮ ಹೈಕಮಾಂಡ್ ಸೇರಿ ತೀರ್ಮಾನ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಉಪಚುನಾವಣೆಗೆ ದಿನಾಂಕ ಘೋಷಣೆ

ನವದೆಹಲಿ; ರಾಜ್ಯದಲ್ಲಿ ತೆರವಾಗಿರುವ ಮೂರು ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚನ್ನಪಟ್ಟಣ , ಶಿಗ್ಗಾವಿ, ಸಂಡೂರು ಈ ಮೂರು ಕ್ಷೇತ್ರಗಳಿಗೆ ನವೆಂಬರ್ 13 ಕ್ಕೆ ಈ ಉಪಚುನಾವಣೆ ನಡೆಯಲಿದೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಮುಖ್ಯ ಚುಮಾವಣಾ ಆಯುಕ್ತ ರಾಜೀವ್ ಕುಮಾರ್ ಎಚ್ ಡಿ ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ, , ಇ.ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿರುವ ಸಂಡೂರು ಕ್ಷೇತ್ರ, ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ ಎಂದಿದ್ದಾರೆ.

ಇನ್ನು ಉಪ ಚುನಾವಣೆ ದಿನಾಂಕ ಘೋಷಣೆಯಾದ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ‌ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಎಂದಿದ್ದಾರೆ. ನಾನು ಮಳೆಯನ್ನೂ ಸ್ವಾಗತ ಮಾಡುತ್ತೇನೆ, ಚುನಾವಣೆಯನ್ನೂ ಸ್ವಾಗತ ಮಾಡ್ತೇನೆ ಎಂದು ಅವರು ಹೇಳಿದ್ರು.

ಚನ್ನಪಟ್ಟಣಕ್ಕೆ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ನಗೆ ಬೀರಿದ್ದಾರೆ. ಎಲೆಕ್ಷನ್ ಬಂದಿದೆ, ಪ್ರಜಾಪ್ರಭುತ್ವದ ಹಬ್ಬ. ಮೂರು ಕ್ಷೇತ್ರಗಳನ್ನ ಗೆಲ್ತೀವಿ ಎಂಬ ವಿಶ್ವಾಸ ಇದೆ ಎಂದರು. ಇನ್ನು ಸಿ ಪಿ ಯೋಗೇಶ್ವರ್ ರೆಬಲ್ ವಿಚಾರಕ್ಕೆ ರಿಯ್ಯಾಕ್ಟ್  ಮಾಡಿದ ಅವರು ನಿಮ್ಮ ಮಾತನ್ನ ನಂಬೊಲ್ಲಾ, ಯಾವಾಗ ಹೇಳಿದ್ದಾರೆ?ನನಗೆ ಅದೆಲ್ಲಾ ಗೊತ್ತಿಲ್ಲ. ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಆಗಲಿ.ಅವರು ಯಾವ ನಿರ್ಧಾರ ತೆಗೆದುಕೊಳ್ತಾರೆ ನೋಡೋಣಾ.ಆಮೇಲೆ ನಮ್ಮ ನಿರ್ಧಾರ ಏನು ಅಂತ ಹೇಳ್ತಿವಿ. ಈಗ ಯಾಕೆ ಅದೆಲ್ಲಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.