ಮಂಡ್ಯ; ಬೆಂಗಳೂರು ಜನರ ಬಹುದಿನಗಳ ಕನಸು ಕಾವೇರಿ ಐದನೇ ಹಂತದ ಯೋಜನೆ ಇಂದು ಲೋಕಾರ್ಪಣೆಗೊಂಡಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಯೋಜನೆಗೆ ಇಂದು ಚಾಲನೆ ದೊರೆತಿದೆ.ಬಿಬಿಎಂಪಿ ವ್ಯಾಪ್ತಿಯ ೧೧೦ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದ್ದು, ೪೩೩೬ ಕೋಟಿ ವೆಚ್ಚದ ಯೋಜನೆ ಇದಾಗಿದೆ.ಯೋಜನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಚಾಲನೆ ನೀಡಿದ್ರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ 2014ರಲ್ಲಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿದ್ದ ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಕಾವೇರಿ ಐದನೇ ಹಂತದ ಯೋಜನೆಗೆ ಇಂದು ನಾನೇ ಚಾಲನೆ ನೀಡುತ್ತಿದ್ದೇನೆ ಎನ್ನುವುದು ಸಂತಸದ ವಿಚಾರ. 50ಲಕ್ಷಕ್ಕೂ ಅಧಿಕ ಜನರ ಕಾವೇರಿ ನೀರಿನ ಕನಸು ನನಸಾದ ಸುದಿನವಿದು. ಈ ದಿನ ನನ್ನ ಬದುಕಿನಲ್ಲಿ ಬಹುಕಾಲ ನೆನಪಲ್ಲಿ ಉಳಿಯಲಿದೆ ಎಂದರು.
ಇನ್ನು ಕಾವೇರಿ ಐದನೇ ಹಂತದ ಯೋಜನೆಗೆ ಚಾಲನೆ ನೀಡಿದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು 2014ರಲ್ಲಿ ನಾನೇ ಶಂಕುಸ್ಥಾಪನೆ ಮಾಡಿದ್ದೆ, ಇಂದು ನನ್ನಿಂದಲೇ ಉದ್ಘಾಟನೆಯಾಗಿದೆ. ನಾನು ನುಡಿದಂತೆ ನಡೆದಿದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ಸರ್ಕಾರಗಳು ಅಗತ್ಯ ಹಣ ಬಿಡುಗಡೆ ಮಾಡದೆ ನಿರಾಸಕ್ತಿ ವಹಿದಿದ್ದರಿಂದ ಯೋಜನೆ ನಿಧಾನವಾಯಿತು. ಮತ್ತೆ ನಾವು ಅಧಿಕಾರಕ್ಕೆ ಬಂದು ಯೋಜನೆ ಲೋಕಾರ್ಪಣೆಗೊಳಿಸಿ 110 ಹಳ್ಳಿಗಳಿಗೆ ನೀರನ್ನು ಒದಗಿಸಿದ್ದೇವೆ. ಆರನೇ ಹಂತದ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದು ನುಡಿದಂತೆ ನಡೆದು ಜನರ ಕೆಲಸ ಮಾಡಿ ತೋರಿಸಿದ್ದೇವೆ ಎಂದಿದ್ದಾರೆ.
ಕಾವೇರಿ ಐದನೇ ಹಂತದ ಯೋಜನೆಗೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ನಾನೇ ಎಲ್ಲಾ ಮಾಡಿಸಿದ್ದು ಅಂತಾ ನಿನ್ನೆ ಡಿಸಿಎಂ ಜಂಭ ಕೊಚ್ಚಿ ಕೊಂಡಿದ್ದಾರೆ.ಅವರು ಏನೇ ಹೇಳಿದರೂ ದಾಖಲೆಗಳು ಮಾತಾಡುತ್ತವೆ.ಯೋಜನೆ ಪ್ರಾರಂಭ ಆದಾಗ ಬಿಜೆಪಿ ಸರ್ಕಾರ ಇತ್ತು. ೮೦% ಕೆಲಸವನ್ನು ನಾವೇ ಮಾಡಿದ್ದೇವೆ.ಇವರು ಬಂದು ಈಗ ಒಂದು ವರ್ಷ ಆಗಿದೆ. ದೇವರನ್ನು ಕೂರಿಸಿ ಹೋಮ ಹವನ ಮಾಡಿದ್ದು ನಾವು. ಮಂಗಳಾರತಿ ಸಮಯದಲ್ಲಿ ಇವರು ಬಂದು ನಮ್ಮದು ಅಂತಾ ಹೇಳುತ್ತಿದ್ದಾರೆ.110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದು ನಾವು. ಮಂಗಳಾರತಿ ತೆಗೆದುಕೊಳ್ಳಲು ಸರಿಯಾದ ಸಮಯಕ್ಕೆ ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.