ಬೆಂಗಳೂರು; ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಿಸಲು ಆದೇಶ ನೀಡಿದೆ. ಈ ಹಿನ್ನೆಲೆ ಮುಂದಿನ ಕಾನೂನೂ ಹೋರಾಟಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರು ಹಾಗೂ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ರು.
ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆಗ ಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಕಾನೂನು ಸಚಿವ ಹೆಚ್ ಕೆ ಪಾಟೀಲ್, ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ವೀರಪ್ಪ ಮೋಯ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಭಾಗಿಯಾಗಿದ್ದರು.
ಈ ಸಭೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್ ಕೊಟ್ಟ ಆದೇಶದ ಕುರಿತು ಚರ್ಚೆ ನಡೆಯಿತು. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖ ಆಗಿರುವ ಅಂಶಗಳ ಕುರಿತು ಸಭೆಯಲ್ಲಿ ಕಾನೂನು ತಜ್ಞರು ಹಾಗೂ ಹಿರಿಯ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದರು. ಸಿಆರ್ಪಿಸಿ ಸೆಕ್ಷನ್ ಕೋಟ್ ಮಾಡಿರುವ ಕುರಿತು ಚರ್ಚಿಸಿ, ಮುಂದಿನ ಕಾನೂನು ನಡೆಯ ಕುರಿತು ಚರ್ಚಿಸಲಾಯಿತು.
ಇನ್ನು ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಕೋರ್ಟ್ ತೀರ್ಪಿನ ಬಗ್ಗೆ ಅಧ್ಯಯನ ಮಾಡಿದ್ದೇವೆ. ಈ ವೇಳೆ ಕಾನೂನಾತ್ಮಕ ಲೋಪ ದೋಷಗಳಿವೆ ಅನ್ನೋದು ನಮಗೆ ಗೊತ್ತಾಗಿದೆ.ನ್ಯಾಯಮೂರ್ತಿ ಗಳು ಸಿಎಂ ಸಿದ್ದರಾಮಯ್ಯ ಪಾತ್ರ ಏನು ಎಂದು ಕೇಳಿದ್ದರು.ಆದರೆ ಆ ಪ್ರಶ್ನೆಗೆ ತೀರ್ಪಿನಲ್ಲೂ ಉತ್ತರವಿಲ್ಲ, ಯಾರೂ ಕೂಡ ಸಿಎಂ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ತೋರಿಸಲು ಆಗಿಲ್ಲ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ತನಿಖೆಯ ವಿಚಾರಣೆ ಏನು ಬೇಕಾದರೂ ಮಾಡಿಕೊಳ್ಳಲಿ. ವಿಚಾರಣೆ ಆಗ್ಲಿ ತನಿಖೆ ಆಗ್ಲಿ ನಮ್ಮದೇನೂ ಅಭ್ಯಂತರ ಇಲ್ಲ ಎಂದಿದ್ದಾರೆ.
ನಾವು ಈಗಾಗಲೇ ದೆಹಲಿಯ ವಕೀಲರ ಅಭಿಪ್ರಾಯ ಕೂಡ ಪಡೆದುಕೊಂಡಿದ್ದೇವೆ. ತೀರ್ಪಿನಲ್ಲಿಯೇ ಹಲವು ಲೋಪ ದೋಷಗಳಿವೆ. ಖಂಡಿತವಾಗಿ ತೀರ್ಪಿನಲ್ಲಿ ಲೋಪಗಳಿವೆ ಅನ್ನೋದು ಗೊತ್ತಾಗಿದೆ.ನಾವು ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆಯಾವಾಗ ಮೇಲ್ಮನವಿ ಸಲ್ಲಿಸಬೇಕು ಅಂತ ಇನ್ನೂ ಕೂಡ ತೀರ್ಮಾನ ಮಾಡಿಲ್ಲ. ಅಭಿಷೇಕ್ ಮನು ಸಿಂಘ್ವಿಯವರ ಅಭಿಪ್ರಾಯ ಕೂಡ ಪಡೆದುಕೊಂಡಿದ್ದೇವೆ. ಏಕ ಸದಸ್ಯ ಪೀಠ ಹೇಳಿದ್ದೇ ಅಂತಿಮ ಅಲ್ಲ. ಕಲ್ಲಿನ ಮೇಲೆ ಕೆತ್ತಿದಂತೆ ಇದನ್ನು ಸ್ವೀಕಾರ ಮಾಡಲು ಸಾಧ್ಯವಿಲ್ಲ. ಸುಪ್ರಿಂ ಕೋರ್ಟ್ ತೀರ್ಪು ನೀಡಿದರೆ ಮಾತ್ರ ಅದು ಕಾನೂನಾಗುತ್ತದೆ.ಇಲ್ಲದಿದ್ದರೆ ಅದನ್ನು ಅಂತಿಮ ಎಂದು ತೀರ್ಮಾನಿಸಲಾಗುವುದಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಹೇಳಿಕೆ ನೀಡಿದ್ದಾರೆ.