ಕೇರಳ: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಇಡೀ ವಿಶ್ವವೇ ಕಣ್ಣೀರು ಸುರಿಸುತ್ತಿದೆ. ಸದ್ಯ ದುರಂತಕ್ಕೆ ಬಲಿಯಾದವರ ಸಂಖ್ಯೆ 370ರ ಗಡಿ ದಾಟಿದೆ. ದುರಂತ ನಡೆದು ಇಂದಿಗೆ 6 ದಿನ. ಸದ್ಯ ಕೇರಳದಲ್ಲಿ ವರುಣ ಆರ್ಭಟ ಕೊಂಚ ಕಡಿಮೆಯಾಗಿರೋದರಿಂದ ರಕ್ಷಣಾ ತಂಡಗಳಿಗೆ ಕಾರ್ಯಾಚರಣೆಗೆ ಕೊಂಚ ಅನುಕೂಲವಾಗಿದೆ. ಆರಂಭದಲ್ಲಿ ನಿರಂತರ ಮಳೆಯಿಂದಾಗಿ ಕಾರ್ಯಾಚರಣೆ ಕಷ್ಟವಾಗಿತ್ತು. ಆದರೆ ಸದ್ಯ ಕಾರ್ಯಾಚರಣೆಗೆ ವರುಣ ಸ್ವಲ್ಪ ಅನುಕೂಲ ಒದಗಿಸಿಕೊಟ್ಟಿದ್ದಾನೆ.ರಾಡಾರ್, ಪೊಲೀಸ್ ಶ್ವಾನಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದು ಒಂದೇ ದಿನ ಸೂಜಿಪಾರ ಫಾಲ್ಸ್ ಬಳಿ 20 ಮೃತದೇಹಗಳನ್ನು ರಕ್ಷಣಾತಂಡವರು ಹೊರ ತೆಗೆದಿದ್ದಾರೆ.
ಇನ್ನು ಈ ದುರಂತಕ್ಕೆ ಈಗಾಗಲೇ ಅನೇಕ ತಾರೆಯರು ಸ್ಪಂದಿಸಿದ್ದಾರೆ. ಬಹುಭಾಷಾ ನಟಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ 10 ಲಕ್ಷ ರೂಪಾಯಿಗಳನ್ನು ಕೇರಳ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಅಲ್ಲದೇ ತಮಿಳು ನಟರಾದ ಸೂರ್ಯ, ಅವರ ಪತ್ನಿ ಜ್ಯೋತಿಕಾ, ಸಹೋದರ ಕಾರ್ತಿ ಈ ಮೂವರು ಸೇರಿ 50 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಲೆಯಾಳಂ ನಟ ಮೋಹನ್ ಲಾಲ್ ಅವರು ಸ್ವತಃ ತಾವೇ ದುರಂತ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ 1 ಕೋಟಿ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡಿದ್ದಾರೆ. ಇದರ ಬೆನ್ನಲ್ಲೇ ಟಾಲಿವುಡ್ ನಟ ಅಲ್ಲು ಅರ್ಜುನ್ ದುರಂತಕ್ಕೆ ಸ್ಪಂದಿಸಿದ್ದು ಸಂತ್ರಸ್ತರಿಗೆ 25 ಲಕ್ಷ ರೂ.ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಪೋಸ್ಟ್ ಒಂದನ್ನು ಹಾಕಿದ್ದಾರೆ. “ವಯನಾಡ್ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ ನನಗೆ ಅತೀವ ದುಃಖ ತಂದಿದೆ. ಕೇರಳವು ಯಾವಾಗಲೂ ನನಗೆ ಸಾಕಷ್ಟು ಪ್ರೀತಿ ನೀಡಿದೆ. ಇಲ್ಲಿನ ಪುನರ್ವಸತಿ ಕಾರ್ಯಕ್ಕಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ನಾನು 25 ಲಕ್ಷ ರೂ.ಗಳನ್ನು ದೇಣಿಗೆ ನೀಡುವ ಮೂಲಕ ನನ್ನ ಕೈಲಾದಷ್ಟು ಮಾಡಲು ಬಯಸುತ್ತೇನೆ. ನಿಮ್ಮ ಸುರಕ್ಷತೆ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ನಲ್ಲಿ ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.
ಮಾನವೀಯತೆ ಮರೆತ ಜನ; ವಯನಾಡು ದುರಂತದಲ್ಲಿ ಸರ್ವಸ್ವವನ್ನು ಕಳೆದುಕೊಂಡವರಿಗೆ ಈಗ ಕಳ್ಳರ ಕಾಟ
ಯನಾಡ್: ಊಹಿಸಲಾಗದ ಜನ ಸ್ಫೋಟಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದೆ. ಪ್ರವಾಸಿಗರ ಪಾಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ವಯನಾಡು ಸ್ಮಶಾನವಾಗಿ ಬದಲಾಗಿದೆ. ಹುಡುಕಿದಲ್ಲೆಲ್ಲಾ ಹೆಣಗಳೇ ಪತ್ತೆಯಾಗುತ್ತಿವೆ.200ಕ್ಕೂ ಹೆಚ್ಚು ಜನ ಇದುವರೆಗೂ ಪತ್ತೆಯಾಗಿಲ್ಲ. ಇಡೀ ವಿಶ್ವವೇ ವಯನಾಡಿನ ಜನರಿಗಾಗಿ ಮರಗುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಮಾನವೀಯತೆಯನ್ನೇ ಮರೆತ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ.
ಚೂರಲ್ಮಾಲ ಹಾಗೂ ಮುಂಡಕೈ ಗ್ರಾಮಗಳು ಭೂಕುಸಿತಕ್ಕೆ ಅಕ್ಷರಶಃ ಸ್ಮಶಾನಗಳಾದ್ರೆ ಭೂಕುಸಿತದ ಆತಂಕದಲ್ಲಿದ್ದ ಒಂದಷ್ಟು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿದ್ದಾರೆ. ಮನೆ ಮಠ ಎಲ್ಲವನ್ನೂ ಬಿಟ್ಟು ಬಂದಿರುವ ಅವರು ಸದ್ಯ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ಕಳ್ಳರು ಗ್ರಾಮಗಳಲ್ಲಿರು ಅವರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ತಂಗಿರುವ ರೆಸಾರ್ಟ್ ಗಳಲ್ಲೂ ಕಳ್ಳತನವಾಗುತ್ತಿದ್ದು, ಗ್ರಾಮದಲ್ಲಿರುವ ನಮ್ಮ ಮನೆಗಳಿಗೆ ಹೋಗಿ ನೋಡಿದಾಗ ಅಲ್ಲಿ ಬಾಗಿಲು ಮುರಿದು ಕಳ್ಳತನ ಮಾಡಿರೋದು ನಮಗೆ ಗೊತ್ತಾಗಿದೆ ಅಂತಾ ಅವರೆಲ್ಲಾ ಹೇಳಿದ್ದಾರೆ. ಹಾಗಾಗಿ ಗ್ರಾಮಗಳಿಗೆ ಅಪರಿಚರಿತರಿಗೆ ಬರೋದಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.