ಮನೆ ಪ್ರಸ್ತುತ ವಿದ್ಯಮಾನ ವಯನಾಡು ದುರಂತದಲ್ಲಿ ನಾಪತ್ತೆಯಾಗಿದ್ದ ಚಾಮರಾಜನಗರದ 8 ಮಂದಿಯ ಮೃತದೇಹ ಪತ್ತೆ

ವಯನಾಡು ದುರಂತದಲ್ಲಿ ನಾಪತ್ತೆಯಾಗಿದ್ದ ಚಾಮರಾಜನಗರದ 8 ಮಂದಿಯ ಮೃತದೇಹ ಪತ್ತೆ

0

ಚಾಮರಾಜನಗರ: ಕೇರಳದ ವಯನಾಡಿನಲ್ಲಿ ಸಂಭವಿಸಿದ ರಣ ಭೀಕರ ಜಲಸ್ಫೋಟದಲ್ಲಿ ನಾಪತ್ತೆಯಾಗಿದ್ದ ಚಾಮರಾಜನಗರ ಜಿಲ್ಲೆಯ 9 ಜನರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಗುಂಡ್ಲುಪೇಟೆಯ ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳದ ವಯನಾಡಿಗೆ 9 ಮಂದಿ ತೆರಳಿದ್ದರು.ಅವರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ. ಒಬ್ಬರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ವಯನಾಡು ಭೂಕುಸಿತದಲ್ಲಿ ಚಾಮರಾಜನಗರ ಜಿಲ್ಲೆಯ  ಗುರುಮಲ್ಲ, ಸಾವಿತ್ರಿ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜೀತು, ದಿವ್ಯ ಹಾಗೂ ಶ್ರೇಯಾ ಎಂಬವರು ಸಾವನ್ನಪ್ಪಿದ್ದಾರೆ.ಅವೆರಲ್ಲರ ಮೃತದೇಹ ಪತ್ತೆಯಾಗಿದೆ. ಇನ್ನು ನಾಪತ್ತೆಯಾಗಿರುವ ಸವಿತಾ ಎಂಬುವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇಡೀ ಕುಟುಂಬವೇ ದುರಂತಕ್ಕೆ ಬಲಿಯಾಗಿದೆ. ಆದರೆ ಕುಟುಂಬದಲ್ಲಿದ್ದ ವೃದ್ಧೆ ಮಹಾದೇವಿ ಎಂಬುವರು ಮಾತ್ರವೇ ಬದುಕುಳಿದಿದ್ದಾರೆ. 9 ಮಂದಿಯಲ್ಲಿ 8 ಜನರು ವಯನಾಡು ಭೂ ಕುಸಿತದ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ವಯನಾಡು ದುರಂತಕ್ಕೆ ಕರ್ನಾಟಕದ 9 ಮಂದಿ ಬಲಿ

ವಯನಾಡು  ದುರಂತಕ್ಕೆ 9 ಜನ ಕನ್ನಡಿಗರು ಬಲಿಯಾಗಿದ್ದಾರೆ .ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.. ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಸಾವನ್ನಪ್ಪಿದ್ದಾರೆ. ಪುಟ್ಟಸಿದ್ದಶೆಟ್ಟಿ ಮತ್ತು ರಾಣಿ ಅವರ ಶವವನ್ನು ರಕ್ಷಣಾ ತಂಡ ಹೊರಗೆ ತೆಗೆದಿದೆ. ಇನ್ನು, ಈ ದುರಂತದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಾಲಕನೂ ಸಾವನ್ನಪ್ಪಿದ್ದಾನೆ. ಗುಹ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ  ಮೃತ ಬಾಲಕ. ರವಿ, ಕವಿತಾ ದಂಪತಿಯ ಪುತ್ರನಾಗಿರುವ ರೋಹಿತ್ ಮೇಪ್ಪಾಡಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ತಾಯಿಯೊಂದಿಗೆ ತೆರಳಿದ್ದ. ಮಂಗಳವಾರ ನಸುಕಿನ ಜಾವ ಕುಸಿದ ಗುಡ್ಡದ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾನೆ. ಬುಧವಾರದ ಕಾರ್ಯಾಚರಣೆ ವೇಳೆ ಈತನ ಮೃತದೇಹ ಪತ್ತೆಯಾಗಿದೆ.ಆತನ ತಾಯಿ ಕವಿತಾ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಮೃತಪಟ್ಟ ಕನ್ನಡಿಗರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದಿದ್ದಾರೆ.

ಇನ್ನು ಕೇರಳ ಸಿಎಂ ಪಿಣರಾಯ್ ವಿಜಯನ್ ಜೊತೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿದ್ದು ಕೇರಳಕ್ಕೆ ಬೇಕಾದ ಎಲ್ಲಾ ಅಗತ್ಯ ನೆರವು ನೀಡೋದಾಗಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಪರಿಹಾರ ಕಾರ್ಯದಲ್ಲಿ ನಿಮ್ಮೊಂದಿಗೆ ಕೈ ಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ.ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದಿದ್ದಾರೆ.