ಮನೆ Latest News 300 ರ ಗಡಿ ದಾಟಿದ ವಯನಾಡು ದುರಂತಕ್ಕೆ ಬಲಿಯಾದವರ ಸಂಖ್ಯೆ ; ಹಲವು ಸವಾಲುಗಳ ನಡುವೆ...

300 ರ ಗಡಿ ದಾಟಿದ ವಯನಾಡು ದುರಂತಕ್ಕೆ ಬಲಿಯಾದವರ ಸಂಖ್ಯೆ ; ಹಲವು ಸವಾಲುಗಳ ನಡುವೆ ಭರದಿಂದ ಸಾಗುತ್ತಿದೆ ರಕ್ಷಣಾ ಕಾರ್ಯಾಚರಣೆ

0

ಕೇರಳ; ವಯನಾಡಿನಲ್ಲಿ ಸಂಭವಿಸಿದ ಭೀಕಪ ಭೂ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ.ಇಂದು ಬೆಳಗ್ಗಿನ ಜಾವ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹಲವು ಸವಾಲುಗಳ ನಡುವೆ ಭಾರತೀಯ ಭೂಸೇನೆ, ವಾಯು ಸೇನೆ, ಎನ್‌ಡಿಆರ್‌ಎಫ್, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ.

ಸುರಿಯುತ್ತಿರುವ ರಕ್ಕಸ ಮಳೆಯನ್ನೂ ಲೆಕ್ಕಿಸದೇ ರಕ್ಷಣಾ ಸಿಬ್ಬಂದಿ ಹೆಣಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದರೆ 60 ರಿಂದ 70 ಕಿ.ಮೀ ದೂರವಿರುವ ಮಲ್ಲಪ್ಪುರಂ ಜಿಲ್ಲೆಯಲ್ಲಿ ಮೃತದೇಹಗಳು ಪತ್ತೆಯಾಗುತ್ತಿದೆ. ನದಿಯಲ್ಲಿ 60 ರಿಂದ 70 ಕಿಲೋ ಮೀಟರ್ ಗಳಷ್ಟು ದೂರ ಹೆಣಗಳು ತೇಲಿ ಹೋಗಿವೆ.

ಇನ್ನು ಮೃತದೇಹಗಳು ಕೂಡ ಅತ್ಯಂತ ಭೀಕರ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ. ಕೆಲವು ಮೃತದೇಹಗಳಲ್ಲಿ ಕಾಲಿಲ್ಲ, ಕೈಯಿಲ್ಲ, ತಲೆಯಲ್ಲಿ ಈ ರೀತಿ ಪತ್ತೆಯಾಗುತ್ತಿವೆ. ಇನ್ನು ಈಗಾಗಲೇ ಸಾವನ್ನಪ್ಪಿದವರ ಸಂಖ್ಯೆ 300ರ ಗಡಿ ದಾಟಿದ್ದು, ಇನ್ನೂ ಕೂಡ ಸತ್ತವರ ಸಂಖ್ಯೆ ಏರುತ್ತಲೇ ಇದೆ. ಇದುವರೆಗೂ 192 ಮಂದಿ ನಾಪತ್ತೆಯಾಗಿದ್ದು, 1,592 ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. 8 ಸಾವಿರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.  ಇದುವೆರಗೂ  3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಿಸಿದ್ದು, ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ಅನ್ನು ಚೋರ್ ಮಂಡಲಾದಲ್ಲಿ ತೆರೆಯಲಾಗಿದೆ.

ವಯನಾಡು ದುರಂತಕ್ಕೆ 7 ಜನ ಕನ್ನಡಿಗರು  ಬಲಿ

ವಯನಾಡು ದುರಂತಕ್ಕೆ 7 ಜನ ಕನ್ನಡಿಗರು ಬಲಿಯಾಗಿದ್ದಾರೆ .ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.. ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಸಾವನ್ನಪ್ಪಿದ್ದಾರೆ. ಪುಟ್ಟಸಿದ್ದಶೆಟ್ಟಿ ಮತ್ತು ರಾಣಿ ಅವರ ಶವವನ್ನು ರಕ್ಷಣಾ ತಂಡ ಹೊರಗೆ ತೆಗೆದಿದೆ. ಇನ್ನು, ಈ ದುರಂತದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಾಲಕನೂ ಸಾವನ್ನಪ್ಪಿದ್ದಾನೆ. ಗುಹ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ  ಮೃತ ಬಾಲಕ. ರವಿ, ಕವಿತಾ ದಂಪತಿಯ ಪುತ್ರನಾಗಿರುವ ರೋಹಿತ್ ಮೇಪ್ಪಾಡಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ತಾಯಿಯೊಂದಿಗೆ ತೆರಳಿದ್ದ. ಮಂಗಳವಾರ ನಸುಕಿನ ಜಾವ ಕುಸಿದ ಗುಡ್ಡದ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾನೆ. ಬುಧವಾರದ ಕಾರ್ಯಾಚರಣೆ ವೇಳೆ ಈತನ ಮೃತದೇಹ ಪತ್ತೆಯಾಗಿದೆ.ಆತನ ತಾಯಿ ಕವಿತಾ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

 

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಮೃತಪಟ್ಟ ಕನ್ನಡಿಗರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದಿದ್ದಾರೆ.

ಇನ್ನು ಕೇರಳ ಸಿಎಂ ಪಿಣರಾಯ್ ವಿಜಯನ್ ಜೊತೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿದ್ದು ಕೇರಳಕ್ಕೆ ಬೇಕಾದ ಎಲ್ಲಾ ಅಗತ್ಯ ನೆರವು ನೀಡೋದಾಗಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಪರಿಹಾರ ಕಾರ್ಯದಲ್ಲಿ ನಿಮ್ಮೊಂದಿಗೆ ಕೈ ಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ.ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ವಯನಾಡಿಗೆ ತೆರಳಿದ ಸಚಿವ ಸಂತೋಷ್ ಲಾಡ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.

ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ.