ಮನೆ Latest News ವಯನಾಡಿನ ದುರಂತಕ್ಕೆ ಇದುವರೆಗೂ 256 ಜನ ಬಲಿ, 192 ಮಂದಿ ನಾಪತ್ತೆ; 7 ಜನ ಕನ್ನಡಿಗರು...

ವಯನಾಡಿನ ದುರಂತಕ್ಕೆ ಇದುವರೆಗೂ 256 ಜನ ಬಲಿ, 192 ಮಂದಿ ನಾಪತ್ತೆ; 7 ಜನ ಕನ್ನಡಿಗರು ಬಲಿ

0

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತ ದುರಂತಕ್ಕೆ ಇದುವರೆಗೂ 256 ಮಂದಿ ಬಲಿಯಾಗಿದ್ದಾರೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನೂರಾರು ಸವಾಲುಗಳ ನಡುವೆ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಇನ್ನು ಈ ದುರಂತಕ್ಕೆ 7 ಜನ ಕನ್ನಡಿಗರು ಬಲಿಯಾಗಿದ್ದಾರೆ .ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.. ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಸಾವನ್ನಪ್ಪಿದ್ದಾರೆ. ಪುಟ್ಟಸಿದ್ದಶೆಟ್ಟಿ ಮತ್ತು ರಾಣಿ ಅವರ ಶವವನ್ನು ರಕ್ಷಣಾ ತಂಡ ಹೊರಗೆ ತೆಗೆದಿದೆ. ಇನ್ನು, ಈ ದುರಂತದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಾಲಕನೂ ಸಾವನ್ನಪ್ಪಿದ್ದಾನೆ. ಗುಹ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ  ಮೃತ ಬಾಲಕ. ರವಿ, ಕವಿತಾ ದಂಪತಿಯ ಪುತ್ರನಾಗಿರುವ ರೋಹಿತ್ ಮೇಪ್ಪಾಡಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ತಾಯಿಯೊಂದಿಗೆ ತೆರಳಿದ್ದ. ಮಂಗಳವಾರ ನಸುಕಿನ ಜಾವ ಕುಸಿದ ಗುಡ್ಡದ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾನೆ. ಬುಧವಾರದ ಕಾರ್ಯಾಚರಣೆ ವೇಳೆ ಈತನ ಮೃತದೇಹ ಪತ್ತೆಯಾಗಿದೆ.ಆತನ ತಾಯಿ ಕವಿತಾ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಮೃತಪಟ್ಟ ಕನ್ನಡಿಗರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದಿದ್ದಾರೆ.

ಇನ್ನು ಕೇರಳ ಸಿಎಂ ಪಿಣರಾಯ್ ವಿಜಯನ್ ಜೊತೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿದ್ದು ಕೇರಳಕ್ಕೆ ಬೇಕಾದ ಎಲ್ಲಾ ಅಗತ್ಯ ನೆರವು ನೀಡೋದಾಗಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಪರಿಹಾರ ಕಾರ್ಯದಲ್ಲಿ ನಿಮ್ಮೊಂದಿಗೆ ಕೈ ಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ.ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ವಯನಾಡಿಗೆ ತೆರಳಿದ ಸಚಿವ ಸಂತೋಷ್ ಲಾಡ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.

ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ.