ಮನೆ Latest News ವಯನಾಡಿನ ರಣ ಭೀಕರ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 360ಕ್ಕೆ ಏರಿಕೆ

ವಯನಾಡಿನ ರಣ ಭೀಕರ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 360ಕ್ಕೆ ಏರಿಕೆ

0

ವಯನಾಡ್: ಎಂದು ಕಂಡು ಕೇಳರಿಯದ ರಣ ಭೀಕರ ಭೂಕುಸಿತಕ್ಕೆ ದೇವರ ನಾಡು ಕೇರಳ ಅಕ್ಷರಶಃ ನಲುಗಿ ಹೋಗಿದೆ. ಹುಡುಕಿದ ಕಡೆಯೆಲ್ಲಾ ಮೃತದೇಹಗಳು ಪತ್ತೆಯಾಗುತ್ತಿದ್ದು ಕ್ಷಣ ಕ್ಷಣಕ್ಕೂ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಇಂದು ಕೂಡ ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ನಡೆಸಿದವು. ಸುಧಾರಿತ ತಾಂತ್ರಿಕ ಉಪಕರಣಗಳು ಹಾಗೂ ಶ್ವಾನಗಳನ್ನು ಬಳಸಿಕೊಂಡು ಬದುಕುಳಿದವರನ್ನು ರಕ್ಷಿಸುವ ಕಾರ್ಯಾಚರಣೆ ಹಾಗೂ ಅವಶೇಷಗಳಡಿ ಅಡಿ ಹುದುಗಿ ಹೋಗಿರುವ ಮೃತದೇಹಗಳ ಪತ್ತೆ ಹಚ್ಚುವಲ್ಲಿ ತೊಡಗಿಸಿಕೊಂಡಿದ್ರು.

ಇದುವರೆಗೂ 360 ಮೃತದೇಹಗಳು ಪತ್ತೆಯಾಗಿದ್ರೆ, ಸುಮಾರು 206 ಜನರು ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಅಧಿಕೃತ ಮೂಲಗಳ ಪ್ರಕಾರ, ಇದುವರೆಗೂ 341 ಮರಣೋತ್ತರ ಪರೀಕ್ಷೆಗಳು  ಪೂರ್ಣಗೊಂಡಿವೆ ಮತ್ತು 146 ಮೃತದೇಹಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ.

ವೈಮಾನಿಕ ಡ್ರೋನ್ ಚಿತ್ರಗಳು ಮತ್ತು ಸೆಲ್ ಫೋನ್ಗಳಿಂದ ಜಿಪಿಎಸ್ ನಿರ್ದೇಶಾಂಕಗಳನ್ನು ಬಳಸಿಕೊಂಡು ರಕ್ಷಣಾ ತಂಡಗಳು ಸ್ಥಳೀಯರ ಸಹಕಾರದೊಂದಿಗೆ ಸೋಧ ಕಾರ್ಯ ನಡೆಸುತ್ತಿವೆ. ಇನ್ನು ಸೇನೆ ನಿರ್ಮಿಸಿರುವ 190 ಅಡಿ ಉದ್ದದ 24 ಟನ್ ತೂಕದ ಬೈಲಿ ಸೇತುವೆ ರಕ್ಷಣಾ ಕಾರ್ಯಾಚರಣೆಗೆ ಬಹುದೊಡ್ಡ ಶಕ್ತಿ ಅಂದರೆ ಅತಿಶಯೋಕ್ತಿಯಲ್ಲ.

 

ವಯನಾಡು ದುರಂತದಲ್ಲಿ ಸಾವನ್ನಪ್ಪಿದ ಚಾಮರಾಜನಗರದ 8 ಮಂದಿಯ ಮೃತದೇಹ ಪತ್ತೆ

ಕೇರಳದ ವಯನಾಡಿನಲ್ಲಿ ಸಂಭವಿಸಿದ ರಣ ಭೀಕರ ಜಲಸ್ಫೋಟದಲ್ಲಿ ನಾಪತ್ತೆಯಾಗಿದ್ದ ಚಾಮರಾಜನಗರ ಜಿಲ್ಲೆಯ 9 ಜನರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಗುಂಡ್ಲುಪೇಟೆಯ ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳದ ವಯನಾಡಿಗೆ 9 ಮಂದಿ ತೆರಳಿದ್ದರು.ಅವರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ. ಒಬ್ಬರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ವಯನಾಡು ಭೂಕುಸಿತದಲ್ಲಿ ಚಾಮರಾಜನಗರ ಜಿಲ್ಲೆಯ  ಗುರುಮಲ್ಲ, ಸಾವಿತ್ರಿ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜೀತು, ದಿವ್ಯ ಹಾಗೂ ಶ್ರೇಯಾ ಎಂಬವರು ಸಾವನ್ನಪ್ಪಿದ್ದಾರೆ.ಅವೆರಲ್ಲರ ಮೃತದೇಹ ಪತ್ತೆಯಾಗಿದೆ. ಇನ್ನು ನಾಪತ್ತೆಯಾಗಿರುವ ಸವಿತಾ ಎಂಬುವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇಡೀ ಕುಟುಂಬವೇ ದುರಂತಕ್ಕೆ ಬಲಿಯಾಗಿದೆ. ಆದರೆ ಕುಟುಂಬದಲ್ಲಿದ್ದ ವೃದ್ಧೆ ಮಹಾದೇವಿ ಎಂಬುವರು ಮಾತ್ರವೇ ಬದುಕುಳಿದಿದ್ದಾರೆ. 9 ಮಂದಿಯಲ್ಲಿ 8 ಜನರು ವಯನಾಡು ಭೂ ಕುಸಿತದ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ವಯನಾಡು ದುರಂತಕ್ಕೆ ಕರ್ನಾಟಕದ 9 ಮಂದಿ ಬಲಿ

ವಯನಾಡು  ದುರಂತಕ್ಕೆ 9 ಜನ ಕನ್ನಡಿಗರು ಬಲಿಯಾಗಿದ್ದಾರೆ .ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.. ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಸಾವನ್ನಪ್ಪಿದ್ದಾರೆ. ಪುಟ್ಟಸಿದ್ದಶೆಟ್ಟಿ ಮತ್ತು ರಾಣಿ ಅವರ ಶವವನ್ನು ರಕ್ಷಣಾ ತಂಡ ಹೊರಗೆ ತೆಗೆದಿದೆ. ಇನ್ನು, ಈ ದುರಂತದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಾಲಕನೂ ಸಾವನ್ನಪ್ಪಿದ್ದಾನೆ. ಗುಹ್ಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ  ಮೃತ ಬಾಲಕ. ರವಿ, ಕವಿತಾ ದಂಪತಿಯ ಪುತ್ರನಾಗಿರುವ ರೋಹಿತ್ ಮೇಪ್ಪಾಡಿ ಗ್ರಾಮದ ತನ್ನ ಸಂಬಂಧಿಕರ ಮನೆಗೆ ತಾಯಿಯೊಂದಿಗೆ ತೆರಳಿದ್ದ. ಮಂಗಳವಾರ ನಸುಕಿನ ಜಾವ ಕುಸಿದ ಗುಡ್ಡದ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾನೆ. ಬುಧವಾರದ ಕಾರ್ಯಾಚರಣೆ ವೇಳೆ ಈತನ ಮೃತದೇಹ ಪತ್ತೆಯಾಗಿದೆ.ಆತನ ತಾಯಿ ಕವಿತಾ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಮೃತಪಟ್ಟ ಕನ್ನಡಿಗರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.