ಮನೆ Latest News ವಂದೇ ಮಾತರಂ ಗೀತೆಗೆ 150 ವರ್ಷ; ಮೈಸೂರಿನಿಂದಲೇ ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್.ಡಿ. ಕುಮಾರಸ್ವಾಮಿ

ವಂದೇ ಮಾತರಂ ಗೀತೆಗೆ 150 ವರ್ಷ; ಮೈಸೂರಿನಿಂದಲೇ ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್.ಡಿ. ಕುಮಾರಸ್ವಾಮಿ

0

ಮೈಸೂರು: ಪಂಡಿತ್ ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿರುವ ‘ವಂದೇ‌ ಮಾತರಂ’ ಗೀತೆಗೆ 150 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರಪ್ರೇಮದ ಬಗ್ಗೆ ರಾಜಿ ಇಲ್ಲದ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ವಂದೇ‌ ಮಾತರಂ’ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಬೆಮೆಲ್ (BEML) ಘಟಕದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಧಾನಿಗಳ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ನಾನು ಸಂತೋಷದಿಂದ ಭಾಗಿಯಾದೆ.ಒಂದೂವರೆ ಶತಮಾನ ಕಳೆದರೂ ಎಲ್ಲಾ ಭಾರತೀಯರ ಹೃನ್ಮನಗಳಲ್ಲಿ ಅಜರಾಮರವಾಗಿರುವ ವಂದೇ ಮಾತರಂ ಗೀತೆಗೆ ಗೌರವ ಸಮರ್ಪಣೆ ಮಾಡಲಾಯಿತು ಎಂದ ಸಚಿವರು; ವಂದೇ ಮಾತರಂ ಗೀತೆಯೂ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ವಹಿಸಿದ ಪಾತ್ರವನ್ನು ಮೆಲುಕು ಹಾಕಿದರು.

ಪಾರಂತ್ಯವಾರು ಛಿದ್ರವಾಗಿದ್ದ ಭಾರತವನ್ನು ಒಗ್ಗೂಡಿಸಿದ ವಂದೇ ಮಾತರಂ ಗೀತೆಯೂ ನೂರ ಐವತ್ತು ವರ್ಷ ಕಳೆದರೂ ಜನ ಅಚ್ಚುಮೆಚ್ಚಿನ ಗೀತೆಯಾಗಿದೆ. ಆ ಗೀತೆಯನ್ನು ಕೇಳುತ್ತಿದ್ದರೆ ಮೈ ರೋಮಾಂಚನ ಆಗುತ್ತದೆ ಎಂದು ಸಚಿವರು ಹೇಳಿದರು.

ಇಡೀ ವರ್ಷಪೂರ್ತಿ ವಂದೇ‌ ಮಾತರಂ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಯುವ ಜನರು ಈ ಮಹಾನ್ ಗೀತೆಯಲ್ಲಿರುವ ಆದರ್ಶ ಅಂಶಗಳನ್ನು ಮನನ ಮಾಡಿಕೊಂಡು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರು ಬಿಇಎಂಎಲ್ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ಶಾಸಕ ಜಿ.ಟಿ. ಹರೀಶ್ ಗೌಡ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.